

ಹುಬ್ಬಳ್ಳಿ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ಸಿ) ವತಿಯಿಂದ ಇಲ್ಲಿಯ ಗೋಪನಕೊಪ್ಪದ ಕೆಪಿಟಿಸಿಎಲ್ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿದ್ಯುಚ್ಚಕ್ತಿ ಸರಬರಾಜು ಕರಡು ನಿಯಮಾವಳಿಗಳ (ಇಲೆಕ್ಟ್ರಿಸಿಟಿ ಸಪ್ಲೆ ರೆಗ್ಯುಲೇಶನ್ಸ್- ಇಎಸ್ಆರ್)- 2026 ಕುರಿತ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಅನೇಕ ಗುತ್ತಿಗೆದಾರರು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದರು.
ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಯ ಹೆಸ್ಕಾಂ ಪಾಲುದಾರರು, ಹೊಸದಾಗಿ ತಂದಿರುವ ತಿದ್ದುಪಡಿ ನಿಯಮಾವಳಿಗಳಿಗೆ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಿದರು. ಸಾವಿರಕ್ಕೂ ಹೆಚ್ಚು ವಿದ್ಯುತ್ ಗುತ್ತಿಗೆದಾರರು ಸಭೆಯಲ್ಲಿ ಪಾಲ್ಗೊಂಡು ಹೊಸ ತಿದ್ದುಪಡಿ ನಿಯಮಕ್ಕೆ ಸಲಹೆ ಸೂಚನೆಗಳನ್ನು ಸೇರಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ, ಸದಸ್ಯರಾದ ಎಚ್.ಕೆ. ಜಗದೀಶ, ಜಾವಿದ್ ಅಖ್ತರ್ ಅವರಿದ್ದ ಆಯೋಗದ ಪೀಠದಲ್ಲಿ ಸುಮಾರು ಮೂರುವರೇ ತಾಸು ವಿಚಾರಣೆ ನಡೆಯಿತು.
ಗುತ್ತಿಗೆದಾರರಾದ ಎಂ.ಎಸ್. ಕಣವಿ, ಎನ್.ಎಂ. ರೇಶ್ಮೆವಾಲಾ, ಮೋಹನ ಕುಲಕರ್ಣಿ, ತುಷಾರ ಬದ್ದಿ, ಶರಣು, ಶಂಕರಪ್ಪ ಮುಂತಾದವರು ಹೊಸ ನಿಯಮಾವಳಿಯಿಂದಾಗುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು.
ಯಾವುದೇ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಸುರಕ್ಷತೆಗೆ ಆದ್ಯತೆ ನೀಡಬೇಕು, ಅನಧಿಕೃತ ಹಾಗೂ ಪರವಾನಗಿ ಪಡೆಯದವರಿಂದ ವಿದ್ಯುತ್ ಸಂಪರ್ಕಗಳನ್ನು ಮಾಡಿಸಿ ಮುಂದಾಗುವ ಅನಾಹುತಗಳಿಗೆ ದಾರಿ ಮಾಡಿ ಕೊಡಬಾರದು. ಪ್ರತಿ ವರ್ಷ ಸರಾಸರಿ 540 ವಿದ್ಯುತ್ ಅವಡಗಳು ಸಂಭವಿಸುತ್ತಿವೆ. ಇವು ಇನ್ನಷ್ಟು ಹೆಚ್ಚಾಗುವ ಆತಂಕವಿದೆ ಎಂದು ಗುತ್ತಿಗೆದಾರರು ತಿಳಿಸಿದರು.
ಹೊಸ ನಿಯಮಾವಳಿಯು ಅಧಿಕೃತ ವಿದ್ಯುತ್ ಗುತ್ತಿಗೆದಾರರಲ್ಲದವರು ಸಹ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಕಾಶ ಮಾಡಿಕೊಡುವಂತಿದೆ. ತಾಂತ್ರಿಕ ಅರ್ಹತೆ ಹಾಗೂ ಪರವಾನಗಿ ಪಡೆದವರು ಈ ಕೆಲಸ ಮಾಡಿದರೆ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಿದಂತಾಗುತ್ತದೆ ಎಂದರು.
ಸ್ವಯಂ ಪ್ರಮಾಣೀಕರಣ: ಕೆಇಆರ್ಸಿ ಕರಡು ನಿಯಮಗಳಲ್ಲಿ 150 ಕಿಲೋವ್ಯಾಟ್ವರೆಗಿನ ಸಾಮರ್ಥ್ಯದ ಕಡಿಮೆ ಒತ್ತಡದ ವಿದ್ಯುತ್ ಸಂಪರ್ಕಗಳಿಗೆ ಮಾಲೀಕರೇ ಸ್ವಯಂ ಪ್ರಮಾಣೀಕರಣ ಮಾಡಿಕೊಳ್ಳಲು (ಸೆಲ್ಫ ಸರ್ಟಿಫಿಕೇಶನ್) ಅವಕಾಶ ಕಲ್ಪಿಸುವ ಪ್ರಸ್ತಾವನೆಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು.
ವಿದ್ಯುತ್ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುವ ರೀತಿಯಲ್ಲಿ ನಿಯಮಗಳನ್ನು ರೂಪಿಸಬೇಕು. ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಉಪಜೀವನ ಕಿತ್ತುಕೊಳ್ಳದೇ ಅವರ ಹಿತವನ್ನೂ ಕಾಯಬೇಕು ಎಂದು ಕೋರಿದರು.
ಕಡ್ಡಾಯಗೊಳಿಸಿ: ವಿದ್ಯುತ್ಗೆ ಸಂಬಂಧಿಸಿದ ಕಾರ್ಯಗಳನ್ನು ಅನುಮತಿ ಪಡೆದ ಗುತ್ತಿಗೆದಾರರಿಂದಲೇ ಮಾಡಿಸಬೇಕೆಂಬ ನಿಯಮ ತರಬೇಕು, ಇದರಿಂದ ನಿರುದ್ಯೋಗ ಸಮಸ್ಯೆಯನ್ನೂ ಒಂದಿಷ್ಟು ನಿವಾರಣೆ ಮಾಡಿದಂತಾಗುತ್ತದೆ ಎಂದು ಗುತ್ತಿಗೆದಾರರ ಸಂದವರು ಆಗ್ರಹಿಸಿದರು.
ವಿದ್ಯುತ್ಗೆ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ, ನಿರ್ಧಾರಗಳನ್ನು ಕೈಗೊಳ್ಳಲು ಉತ್ತರ ಕರ್ನಾಟಕ ಭಾಗದಲ್ಲಿ ಕಾನೂನು ಪರಿಣತಿ ಹೊಂದಿದ ಓಂಬುಡ್ಸಮನ್ ನೇಮಿಸಬೇಕು ಎಂದರು.
ಟಿಸಿಗೆ ವಿಳಂಬ ಬೇಡ: ರೈತರ ಪಂಪ್ಸೆಟ್ಗಳಿಗೆ ಟಿಸಿ ಅಳವಡಿಕೆಗೆ ಇರುವ ನಿಯಮಾವಳಿಗಳನ್ನು ಸರಳೀಕರಣಗೊಳಿಸಬೇಕು. ಯಾವುದೇ ವಿಳಂಬ ಮಾಡಬಾರದು. ಒಂದೇ ಬೋರ್ವೆಲ್ ಇದ್ದರೂ ಅದಕ್ಕೆ ಟಿಸಿ ಕೊಟ್ಟು ಸಂಪರ್ಕ ನೀಡಬೇಕು. ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೆಲವೆಡೆ ಸಮಸ್ಯೆಗಳು ಎದುರಾಗುತ್ತಿವೆ. ಅವುಗಳನ್ನು ಸರಿಪಡಿಸಬೇಕು. ತಾತ್ಕಾಲಿಕ ಸಂಪರ್ಕಕ್ಕೆ ನೀಡಿದ ಮೀಟರ್ ಅನ್ನೇ ಮುಂದೆ ಕಾಯಂ ಮಾಡಬೇಕು. ಅದಕ್ಕಾಗಿ ಪ್ರತ್ಯೇಕ ಶುಲ್ಕ ಆಕರಿಸಬಾರದು ಎಂಬುದು ಸೇರಿದಂತೆ ಹಲವು ಸಲಹೆಗಳನ್ನು ನೀಡಲಾಯಿತು.
ಹೆಸ್ಕಾಂ ಕಚೇರಿಗಳಲ್ಲಿ ಸಿಬ್ಬಂದಿ ಹಾಗೂ ಲೈನ್ಮನ್ಗಳ ಕೊರತೆ ಕಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಗಳು ಎದುರಾದರೆ ಅವುಗಳನ್ನು ಸರಿಪಡಿಸಲು ವಾರಗಟ್ಟಲೆ ಕಾಯಬೇಕಾಗಿದೆ. ಖಾಲಿ ಇರುವ ಸಿಬ್ಬಂದಿ ಬೇಗ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಪಷ್ಟತೆ ನೀಡಿ: ಆಕ್ಯುಪನ್ಸಿ ಸರ್ಟಿಫಿಕೇಟ್ (ಒಸಿ) ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವ ವಿಚಾರವನ್ನು ಅನೇಕ ಗುತ್ತಿಗೆದಾರರು ಪ್ರಸ್ತಾಪಿಸಿದರು. ಒಸಿ ಇಲ್ಲದ ಕಟ್ಟಡಗಳು, ನಿರ್ಮಾಣ ಹಂತದಲ್ಲಿರುವ ಮನೆಗಳು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಅನ್ವಯಿಸುವ ನಿಯಮಗಳ ಕುರಿತು ಸ್ಪಷ್ಟತೆ ಕೊಡಬೇಕು ಎಂದು ಸಭೆಯ ಗಮನ ತರಲಾಯಿತು.
ಹಿರಿಯರಿಗೆ ಆದ್ಯತೆ ಇರಲಿ: ಹಿರಿಯ ಗ್ರಾಹಕ ಮಹಾಂತಪ್ಪ ಮಾತನಾಡಿ, ವಿದ್ಯುತ್ ಸಂಬಂಧಿಸಿದ ಕೆಲಸಗಳಿಗಾಗಿ ಕಚೇರಿಗಳಿಗೆ ಬರುವ ಹಿರಿಯ ನಾಗರಿಕರಿಗೆ ಆದ್ಯತೆ ನೀಡಬೇಕು. ಅವರನ್ನು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡಿಸುವುದು ಅಥವಾ ಸುಮ್ಮನೆ ಕಾಯಿಸುವುದು ಮಾಡಬಾರದು. ಅವರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆಇಆರ್ಸಿ ಅಧಿಕಾರಿಗಳಾದ ಮುಜಾಮಿಲ್ ಖಾನ್, ಸಿದ್ದೇಶ್ವರ ಎನ್., ಶ್ರೀನಿವಾಸಪ್ಪ ಇದ್ದರು.