

ವಿರಾಜಪೇಟೆ: ಸ್ವಉದ್ಯೋಗ ತರಬೇತಿಗಳನ್ನು ನಿರಂತರವಾಗಿ ಹಮ್ಮಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಮಹಿಳೆಯರ ಪಾಲಿನ ಆಶಾಕಿರಣವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿರಾಜಪೇಟೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ವಾಟೆಕಾಡು ಕಣ್ವ ಮುನಿಶ್ವರ ದೇವಸ್ಥಾನದ ಸಭಾಂಗಣದಲ್ಲಿ ಯೋಜನೆಯ ಸದಸ್ಯರಿಗೆ ಸ್ವಉದ್ಯೋಗದೊಂದಿಗೆ ಸ್ವಾವಲಂಬನೆಯ ಮೂಲಕ ಮಹಿಳೆಯರ ಬದುಕು ಹಸನಾಗಿಸಲು ಇತ್ತೀಚೆಗೆ ಆಯೋಜಿಸಿದ್ದ ಅಣಬೆ ಬೇಸಾಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ತರಬೇತಿಯ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಇಂದು ಸ್ವಉದ್ಯೋಗ ಅನ್ನುವುದು ಅತ್ಯಂತ ಪ್ರಚಲಿತ ಹಾಗೂ ಸರ್ವರಿಗೂ ಸಲ್ಲುವ ಉದ್ಯೋಗವಾಗಿದೆ ಎಂದರು.
ಇಂದಿನ ದಿನಗಳಲ್ಲಿ ವಿಶೇಷವಾಗಿ ಮಹಿಳೆಯರು ಹಲವಾರು ವಿಧದ ಸ್ವಉದ್ಯೋಗಗಳಲ್ಲಿ ತೊಡಗಿಸಿಕೊಂಡು ತಮ್ಮ ಸ್ವಾವಲಂಬನೆಯ ಬದುಕನ್ನು ತಾವೇ ಕಟ್ಟಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೂಡ ಈ ಹಾದಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ರುಡ್‌ಸೆಟ್ ಸಂಸ್ಥೆಯ ಮೂಲಕ ಸ್ವಉದ್ಯೋಗ ಕ್ರಾಂತಿಯನ್ನೇ ಮಾಡಿದ್ದಾರೆ. ನಾವು ಕೂಡ ಇತರರ ಲೆಕ್ಕ ಬರೆಯುವುದಕ್ಕಿಂತ ನಮ್ಮ ಲೆಕ್ಕಗಳನ್ನು ನಾವೇ ಬರೆಯುವಂತೆ ಆಗಲಿ ಅನ್ನುವುದೇ ನಮ್ಮ ಆಶಯವಾಗಿದೆ ಎಂದರು.
ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ.ಪ್ರಭಾಕರ್ ಮಾತನಾಡಿ, ಅಣಬೆ ಬೇಸಾಯ ಕ್ರಮಗಳು, ಬೆಳೆಯುವ ವಿಧಾನಗಳು, ಆಹಾರ ಪದ್ಧತಿಗೆ ಸಹಕಾರಿ, ಮಾರುಕಟ್ಟೆ ವ್ಯವಸ್ಥೆ ಎಂಬೆಲ್ಲ ವಿಚಾರ ಬಗ್ಗೆ ಸವಿಸ್ತಾರವಾದ ಮಾಹಿತಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿದರು.
ಇದೇ ಸಂದರ್ಭ ಅಣಬೆ ಬೀಜಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಯೋಜನಾಧಿಕಾರಿ ದಿನೇಶ್ ಬಿ, ವೀಣಾ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೇಯಾ, ಸೇವಾಪ್ರತಿನಿಧಿ ಕಾವೇರಿ ಪಾಲ್ಗೊಂಡಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಾಟೆಕಾಡು ಒಕ್ಕೂಟದ ವತಿಯಿಂದ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯೋಜನೆಯ ಕಾರ್ಯಕರ್ತರು, ಸೇವಾಪ್ರತಿನಿಧಿಗಳು, ಸದಸ್ಯರು ಭಾಗವಹಿಸಿದ್ದರು.