ಲಕ್ಷದೀಪೋತ್ಸವಕ್ಕೆ ಸಾಂಸ್ಕೃತಿ ಕಾರ್ಯಕ್ರಮಗಳ ಮೆರುಗು

New Project (2)
Published on

ಬೆಳ್ತಂಗಡಿ: ಧರ್ಮಸ್ಥಳ ಲಕ್ಷದೀಪೋತ್ಸವದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಷೇತ್ರದ ಅಮೃತವರ್ಷಿಣಿ ಮತ್ತು ಪ್ರೌಢ ಶಾಲಾ ಆವರಣದ ವಸ್ತುಪ್ರದರ್ಶನ ವೇದಿಕೆಯಲ್ಲಿ ನಡೆಯುತ್ತಿವೆ. ಮೂರನೇ ದಿನ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತ ಕಲಾಗೋಷ್ಠಿಯಲ್ಲಿ ನಾಗಸ್ವರವಾದನ, ಸಾತ್ವಿಕ ಸಂಗೀತ ಹಾಗೂ ನೃತ್ಯಾರ್ಚನೆ ಮತ್ತು ಮಾಯಾವಿಲಾಸ ನೃತ್ಯರೂಪಕ ಭಾವಪರವಶರನ್ನಾಗಿಸಿತು. ವಸ್ತು ಪ್ರದರ್ಶನ ವೇದಿಕೆಯಲ್ಲಿ ಗಾನ ಸಂಭ್ರಮ, ಭರತನಾಟ್ಯ, ಕೂಚಿಪುಡಿ, ನೃತ್ಯರೂಪಕ ಹಾಗೂ ಯಕ್ಷಗಾನ ತಾಳಮದ್ದಳೆ ರಂಜಿಸಿತು.

ಸಂಜೆ ಬೆಂಗಳೂರಿನ ಶಂಕರ ಶಾನಭಾಗ್ ಮತ್ತು ತಂಡದವರು ಸುಮಾರು ಒಂದೂವರೆ ತಾಸು ಸಾತ್ವಿಕ ಸಂಗೀತ ಕಾರ್ಯಕ್ರಮ ನೀಡಿದರು. ಹಾಡುಗಾರಿಕೆಯಲ್ಲಿ ಶಂಕರ್ ಶಾನಭಾಗ್ ಜತೆಗೆ ಸಹಕಲಾವಿದರಾಗಿ ಜಿತೇಂದ್ರ, ಮೇಘನಾ, ಸ್ವಾತಿ ಶಂಕರಿ, ಸುಷ್ಮಾ ರಾವ್ , ವಿಶಾಖ್ ನಾಗಲಾಪುರ, ನರಹರಿ ಆಚಾರ್ ವಿ, ಅಭಿಷೇಕ್, ಹಿಮ್ಮೇಳ ಕಲಾವಿದರಾಗಿ ತಬಲಾದಲ್ಲಿ ಜಗದೀಶ್ ಕುರ್ತಕೋಟಿ, ಡೋಲಕ್‌ನಲ್ಲಿ ಸತ್ಯಮೂರ್ತಿ ಮತ್ತು ಶಿವಮಲ್ಲು, ಪಕಾವಾಜ್‌ನಲ್ಲಿ ಆನೂರು ಪ್ರಬೋಧ್, ರಿದಂ ಪ್ಯಾಡ್‌ನಲ್ಲಿ ಗುರುದತ್, ಕೀ ಬೋರ್ಡ್‌ನಲ್ಲಿ ದೀಪಕ್ ಜಯಶೀಲನ್, ಗಿಟಾರ್‌ನಲ್ಲಿ ರಾಜಗೋಪಾಲ್, ಕೊಳಲಿನಲ್ಲಿ ರಘುನಂದನ್ ಹಾಗೂ ಸಿತಾರ್‌ನಲ್ಲಿ ಶ್ರೀನಿವಾಸ್ ಸಹಕರಿಸಿದರು.

ಎರಡನೇ ಕಾರ್ಯಕ್ರಮವಾಗಿ ಮಂಗಳೂರಿನ ನಾಟ್ಯರಾಧನಾ ಕಲಾ ಕೇಂದ್ರದ ವಿದುಷಿ ಸುಮಂಗಲಾ ರತ್ನಾಕರ ರಾವ್ ಸಂಗೀತ ಸಂಯೋಜನೆ ಹಾಗೂ ನಿರ್ದೇಶನದಲ್ಲಿ ಒಂದೂವರೆ ತಾಸು ಸಮೂಹ ನೃತ್ಯದ ಮೂಲಕ 28 ಕಲಾವಿದರು ರಸದೌತಣ ನೀಡಿದರು. ವಿಶಿಷ್ಟವಾದ ಮಾಯಾವಿಲಾಸ ನೃತ್ಯರೂಪಕ ಮೆಚ್ಚುಗೆಗೆ ಪಾತ್ರವಾಯಿತು. ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಹಾಗೂ ಹೆಗ್ಗಡೆ ಕುಟುಂಬಸ್ಥರು ಕಾರ್ಯಕ್ರಮ ವೀಕ್ಷಿಸಿ ಕಲಾವಿದರನ್ನು ಗೌರವಿಸಿದರು.

ವಸ್ತು ಪ್ರದರ್ಶನ ವೇದಿಕೆಯಲ್ಲಿ ಮಂಗಳೂರಿನ ಆತ್ಮಶ್ರೀ ಮತ್ತು ಆದಿಶ್ರೀ ಸಹೋದರಿಯರು ಭಕ್ತಿಗೀತೆಗಳ ಗಾಯನದಿಂದ ಮನಸೂರೆಗೊಂಡರು. ತಬಲಾದಲ್ಲಿ ಆತ್ಮಾರಾಮ್ ನಾಯಕ್ ಪುತ್ತೂರು, ಕೀಬೋರ್ಡ್‌ನಲ್ಲಿ ಷಣ್ಮುಖ ಸುಳ್ಯ ಹಾಗೂ ರಿದಂ ಪ್ಯಾಡ್‌ನಲ್ಲಿ ವಿನಯ ರಂಗದೊಳ್ ಸಾಥ್ ನೀಡಿದರು.

ಉಚ್ಚಿಲದ ನಟೇಶ ನೃತ್ಯ ನಿಕೇತನದ ವಿದುಷಿ ಮಂಗಳಾ ಕಿಶೋರ್ ನಿರ್ದೇಶನದಲ್ಲಿ 8 ವಿದ್ಯಾರ್ಥಿಗಳು ಭರತನಾಟ್ಯ ಮತ್ತು ಕೂಚುಪುಡಿಯಲ್ಲಿ ಮನೋಜ್ಞ ಅಭಿನಯದ ಮೂಲಕ ವಿಶೇಷ ಮೆರುಗು ನೀಡಿದರು. ನಟುವಾಂಗದಲ್ಲಿ ವೀಣಾ ಮುರಳೀಧರ ಸಾಮಗ, ಮೃದಂಗದಲ್ಲಿ ಪೃಥ್ವಿರಾಜ್ ಸಾಮಗ, ವಯೊಲಿನ್‌ನಲ್ಲಿ ವಿ.ಶ್ರೀಧರ ಆಚಾರ್ಯ, ಕೊಳಲಿನಲ್ಲಿ ಬಿ.ಎಂ ಪವನರಾಜ್ ಸಾಮಗ ಹಾಗೂ ವರ್ಣಾಲಂಕಾರದಲ್ಲಿ ರಮೇಶ್ ಉಡುಪಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net