ದಕ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂರಕ್ಷಣೆ ಪರಿಕಲ್ಪನೆ; ಮಂಗಳೂರು ಪಾರಂಪರಿಕ ಉತ್ಸವಕ್ಕೆ ಚಾಲನೆ

20241130_102335
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಟಿಪ್ಪು ಮರಣದ ನಂತರ 1799, ಜುಲೈ 8 ರಂದು ಮೇಜರ್ ಸರ್ ಥಾಮಸ್ ಮುನ್ರೋ ಪ್ರಥಮ ಜಿಲ್ಲಾ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿದ ಮಂಗಳೂರು ಸ್ಟೇಟ್‌ಬ್ಯಾಂಕ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಹಳೇ ಕಟ್ಟಡದಲ್ಲಿ ಎರಡು ದಿನಗಳ ಮಂಗಳೂರು ಪಾರಂಪರಿಕ ಉತ್ಸವಕ್ಕೆ ಶನಿವಾರ ಬೆಳಗ್ಗೆ ಚಾಲನೆ ದೊರೆಯಿತು.

ಪಾರಂರಿಕ ಹಿನ್ನೆಲೆ ಹೊಂದಿರುವ ಜಿಲ್ಲಾಧಿಕಾರಿ ಕಚೇರಿಯ ಹಳೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳು ಸ್ಥಳಾಂತರಗೊಂಡಿದ್ದು, ಒಂದು ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿರುವ ಹಳೇ ಕಟ್ಟಡವನ್ನು ಸಂರಕ್ಷಿಸುವ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉದ್ಘಾಟಿಸಿದರು.

ಕರಾವಳಿಯ ಕಸುಬು, ಕಲೆ, ಬದುಕನ್ನು ಬಿಂಬಿಸುವ ಕಲಾಕೃತಿಗಳ ಪ್ರದರ್ಶನ, ಸಂಗೀತ ಸಂಜೆ, ಗುಂಪು ಚರ್ಚೆ, ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ರಚನೆ ಸ್ಪರ್ಧೆ ಕಾರ್ಯಕ್ರಮದ ಮುಖ್ಯ ಆಕರ್ಷಣೆ.

ಶ್ರೀನಿವಾಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಚಾವಡಿ, ಬಾಸೆಲ್ ಮಿಷನ್, ಆರ್ಟ್ ಕೆನರಾ, ಕಲ್ಲಡ್ಕ ಮ್ಯೂಸಿಯಂ, ಕೆನರಾಚೇಂಬರ್ ಮುಂತಾದ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಯೋಗ ನೀಡಿವೆ.

ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಚಿತ್ರಸ್ಪರ್ಧೆಯಲ್ಲಿ ವಿವಿಧಶಿಕ್ಷಣ ಸಂಸ್ಥೆಗಳ 250ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಮಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜು ಕೆ., ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ರಶ್ಮಿ ಉಪಸ್ಥಿತರಿದ್ದರು.

------

ದಕ ಜಿಲ್ಲಾಧಿಕಾರಿ ಕಚೇರಿಯಿದ್ದ ಹಳೇ ಕಟ್ಟಡವು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸುಂದರ ಪರಿಸರದಲ್ಲಿ ಇದೆ. ಈ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ಉಳಿಸುವ ಹಾಗೂ ಬಳಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಕಟ್ಟಡದಲ್ಲಿ ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ.

* ಮುಲ್ಲೈ ಮುಗಿಲನ್

ದಕ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net