

ಡಾ.ಮದನ್ ಪಟೇಲ್ ಅನಿಸಿಕೆ | ಕನ್ನಡ ಭವನದಲ್ಲಿ ಧರ್ಮಣ್ಣ ಧನ್ನಿ ರಚಿಸಿದ ಹೈಕು ಸಂಕಲನ ಜನಾರ್ಪಣೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಪಾನಿಗರು ಎಲ್ಲದರಲ್ಲೂ ದೂರದೃಷ್ಟಿ ಉಳ್ಳವರು ಎಂದು ನಟ, ನಿರ್ಮಾಪಕ ಮತ್ತು ಬರಹಗಾರ ಡಾ.ಮದನ್ ಪಟೇಲ್ ಹೇಳಿದರು.
ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಕಸಾಪ ಶನಿವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಧರ್ಮಣ್ಣ ಧನ್ನಿ ರಚಿಸಿದ ನೆನಪಿನ ಅಲೆಯಲ್ಲಿ ಹೈಕು ಸಂಕಲನ ಜನಾರ್ಪಣೆಗೊಳಿಸಿದ ಅವರು, ೨೧ನೇ ಶತಮಾನದ ಸಂಕೇತ ೫+೭+೫ ಸಾಲುಗಳಲ್ಲಿ ಬರೆದು ಜನರಿಗೆ ಮುಟ್ಟಿಸುವ ಕೆಲಸ ಇಂದಿನ ಜರೂರಿ ಎಂದರು.
ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ಹೈಕು ೧೬ನೇ ಶತಮಾನಕ್ಕಿಂತ ಹಿಂದೆ ಅಸ್ತಿತ್ವಕ್ಕೆ ಬಂದ ಜಪಾನಿ ಕಾವ್ಯ ಪ್ರಕಾರವಾಗಿದ್ದರೂ ಇದಕ್ಕೊಂದು ಮಾತ್ರಾಗಣ, ಒಂದು ಲೆಕ್ಕಾಚಾರವಿದೆ. ಬುದ್ಧನ ತತ್ವ-ಸಂದೇಶ ತಿಳಿಸುವ ಹೈಕುಗೆ ಘನವಾದ ಉz್ದೆÃಶವಿರುತ್ತದೆ. ರವೀಂದ್ರನಾಥ ಟ್ಯಾಗೋರ್ ಇದನ್ನು ಭಾರತದಲ್ಲಿ ಹೆಚ್ಚು ಪ್ರಚುರಪಡಿಸಿದ್ದರು. ೨೩೦ಕ್ಕೂ ಹೆಚ್ಚು ಹೈಕುಗಳಿರುವ ಧರ್ಮಣ್ಣ ಧನ್ನಿ ಅವರ ಈ ಕೃತಿ ತುಂಬ ರಸವತ್ತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಜಪಾನಿ ದೇಶದ ಹೈಕು ಈಗ ಕಾಲ-ದೇಶ ಮೀರಿ ಅನ್ಯ ಭಾಷೆಗಳಲ್ಲಿ ಗೂಡು ಕಟ್ಟಿಕೊಂಡಿದೆ. ಸಂವೇದನಾಶೀಲ ಬರಹಗಳ ಜತೆಗೆ ಲೇಖಕ ಧನ್ನಿ ಹೈಕು ಲೋಕ ಪ್ರವೇಶಿಸಿದ್ದಾರೆ. ಕಸಾಪ ಜಿಲ್ಲೆಯಲ್ಲಿ ಹೊಸ ಆಲೋಚನೆಗಳಿಗೆ ಆದ್ಯತೆ ನೀಡಿ ವಿಭಿನ್ನ ಪ್ರಯೋಗದ ಮೂಲಕ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿದೆ ಎಂದು ತಿಳಿಸಿದರು.
ವಾಣಿಶ್ರೀ ಸಗರಕರ್, ಧರ್ಮಣ್ಣ ಧನ್ನಿ, ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ ರಾವೂರ ಮಾತನಾಡಿದರು. ಪ್ರಮುಖರಾದ ರಾಜೇಂದ್ರ ಮಾಡಬೂಳ, ಶಾಮರಾವ ಸೂರನ್, ಡಾ.ಶಿವರಂಜನ್ ಸತ್ಯಂಪೇಟೆ, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ, ಸಿ.ಎಸ್. ಮಾಲಿಪಾಟೀಲ, ಎ.ಕೆ. ರಾಮೇಶ್ವರ, ಮಾಲಾ ಕಣ್ಣಿ, ಕಲ್ಯಾಣಕುಮಾರ ಶೀಲವಂತ, ಪ್ರಭುಲಿಂಗ ಮೂಲಗೆ, ವಿನೋದಕುಮಾರ ಜನೇವರಿ ಇತರರಿದ್ದರು.