ಧಮ್ ಇದ್ರ ಹಿಡಿರ್ರಿ ನಮ್ಮ ಹೋರಿ…

28 AKR 01
Published on

ಅಕ್ಕಿಆಲೂರ: ಪಟ್ಟಣದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಭಾನುವಾರ ಸಾವಿರಾರು ಜನರ ಮಧ್ಯೆ ವಿಜೃಂಭಣೆಯಿಂದ ಜರುಗಿತು.

ಶಿರಸಿ, ಹಾವೇರಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸಿ.ಜಿ. ಬೆಲ್ಲದ ಕಾಲೇಜು ಹಿಂಭಾಗ ಏರ್ಪಡಿಸಿದ್ದ ಸ್ಪರ್ಧೆಗೆ ಹಾವೇರಿ, ಗದಗ, ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ ಜಿಲ್ಲೆಗಳಿಂದ ಸುಮಾರು 280ಕ್ಕೂ ಹೆಚ್ಚು ಹೋರಿಗಳು ಆಗಮಿಸಿದ್ದವು. ಒಂದು ಕಿಲೋ ಮೀಟರ್ ಸರದಿಯಲ್ಲಿ ನಿಂತು ಅಖಾಡಕ್ಕೆ ಇಳಿಯುತ್ತಿದ್ದ ಹೋರಿಗಳು, ಜೂಲ್, ಬಲೂನ್, ಕೊಬ್ಬರಿಗಳಿಂದ ಶೃಂಗಾರಗೊಂಡು ಎಲ್ಲರ ಗಮನ ಸೆಳೆದವು.

ಅಖಾಡದಲ್ಲಿ ತಮ್ಮ ಬೆಂಬಲಿಗ ಹೋರಿ ಹಿಂದೆ ನೃತ್ಯ ಮಾಡುತ್ತ ಓಡುತ್ತಿದ್ದ ಯುವಕರು ‘ಧಮ್ ಇದ್ದವಾ ಹಿಡಿರ್ರಿ ನಮ್ಮ ಹೋರಿ…‘ ಎಂದು ಪೈಲ್ವಾನರಿಗೆ ಸವಾಲು ಹಾಕುತ್ತಿದ್ದರು. ಶ್ಯಾಡಗುಪ್ಪಿ ಸರ್ಕಾರ, ಅಕ್ಕಿಆಲೂರ ವೀರ ಕೇಸರಿ, ಅನಾಹುತ, ಅಪಾಯ, ಸಾರಂಗ, ಬೆಂಕಿ, ಚಿನ್ನಾಟದ ಚಲುವಾ, ಸುರ್ಪನಕ್ಕಿ, ಗಂಧದಗುಡಿ ಸೇರಿ ವಿವಿಧ ಹೆಸರಿನ ಹೋರಿಗಳು ನೋಡುಗರಿಗೆ ವಿಶೇಷ ಮನರಂಜನೆ ನೀಡಿದವು.

ಅಖಾಡದಲ್ಲಿ ರಭಸವಾಗಿ ಬರುತ್ತಿದ್ದ ಹೋರಿಗಳನ್ನು ಕೊಂಬು ಹಿಡಿದು ನಿಲ್ಲಿಸುತ್ತಿದ್ದ ಪೈಲ್ವಾನರ ಸಾಹಸ ಎಂಥವರನ್ನೂ ಮೈನವಿರೇಳಿಸುತ್ತಿತ್ತು. ಹೋರಿ ಸಾಗುತ್ತಿದ್ದಂತೆ ವೀಕ್ಷಕರಿಂದ ಕೇಕೆ, ಚಪ್ಪಾಳೆ ಜೋರಾಗುತ್ತಿತ್ತು. ಅನೇಕ ಹೋರಿ ಹಬ್ಬಗಳಲ್ಲಿ ರಭಸದಿಂದ ಓಡಿ ಹೆಸರು ಮಾಡಿದ ದಷ್ಟ ಪುಷ್ಟ ಹೋರಿಗಳನ್ನು ನಿಲ್ಲಿಸಿ ಪೈಲ್ವಾನರು ಕೊಬ್ಬರಿ ಹರಿದಿದ್ದು ವಿಶೇಷವಾಗಿತ್ತು.

ಹೋರಿ ಹಬ್ಬ ವೀಕ್ಷಣೆಗಾಗಿ ರಾಜ್ಯದ ವಿವಿಧ ಕಡೆಗಳಿಂದ ಜನತೆ ಸಾಗರೋಪಾದಿಯಲ್ಲಿ ಹರಿದು ಬಂದಿತು. ಮಧ್ಯಾಹ್ನ 3 ಗಂಟೆ ವರೆಗೂ ಬೈಕ್, ಲಾರಿ, ಟ್ರ್ಯಾಕ್ಟರ್​ಗಳಲ್ಲಿ ಪಟ್ಟಣಕ್ಕೆ ಆಗಮಿಸುತ್ತಲೇ ಇದ್ದರು, ಬಾಳಂಬೀಡದಿಂದ ಗೆಜ್ಜಿಹಳ್ಳಿವರೆಗೂ ವಾಹನದಟ್ಟನೆಯಾಗಿತ್ತು. ಅಖಾಡದ ಸುತ್ತಲೂ ಹಾಕಿದ್ದ ತಂಪು ಪಾನಿಯ, ಹಣ್ಣು ಅಂಗಡಿ, ಚಹಾ ಅಂಗಡಿಗಳು ಜನರಿಂದ ತುಂಬಿದ್ದವು.

ಜನಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ ಮೋಹನಕುಮಾರ ಸ್ಪರ್ಧೆ ಉದ್ಘಾಟಿಸಿದರು. ಕೆಪಿಸಿಸಿ ಕಾರ್ಯದರ್ಶಿ ಡಾ.ಪ್ರಕಾಶಗೌಡ ಪಾಟೀಲ, ಜಿಪಂ ಸದಸ್ಯ ಟಾಕನಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net