

ಪಡುಬಿದ್ರಿ: ಎರಡು ವರ್ಷಗಳಿಗೊಮ್ಮೆ ನಡೆಯುವ ಪಡುಬಿದ್ರಿ ಢಕ್ಕೆಬಲಿಗೂ, ಉಡುಪಿಗೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಯುವಕರು ಸಮಾಜಮುಖಿಗಳಾಗಿ ಢಕ್ಕೆಬಲಿ ಪ್ರಸನ್ನ ಕಾಲದಲ್ಲಿ ಭಕ್ತಿ ಶ್ರದ್ಧೆಗಳೊಂದಿಗೆ ದೈವತ್ವದ ಚಿಂತನೆಯಲ್ಲೇ ಯಾವುದೇ ಫಲಾಪೇಕ್ಷೆ ಇಲ್ಲದೇ ತಮ್ಮ ಕರ್ತವ್ಯ ಸೇವಾರೂಪದಲ್ಲಿ ಮಾಡುತ್ತಾರೆ. ಇದರಿಂದ ಸೇವಾಕರ್ತೃಗಳಿಗೂ ಉತ್ತಮ ಪ್ರಸಾದ ಲಭ್ಯವಾಗುತ್ತದೆ ಎಂದು ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದರು.
ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿ ವಿಶಿಷ್ಟ ಆಚರಣೆಯೊಂದಿಗೆ ಪ್ರಸಿದ್ಧವಾದ ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ಪ್ರಥಮ ದಿನದ ಮಂಡಲ ಹಾಕುವ ಢಕ್ಕೆಬಲಿ ಸಂದಭ ಭೇಟಿ ನೀಡಿ, ಶ್ರೀ ಖಡ್ಗೇಶ್ವರಿ ಜ್ಞಾನಮಂದಿರದಲ್ಲಿ ಆಶೀರ್ವಚನ ನೀಡಿದರು.
ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ, ಗುರಿಕಾರ ಕೊರ್ನಾಯ ಪದ್ಮನಾಭ ರಾವ್ ಶ್ರೀಗಳನ್ನು ಸ್ವಾಗತಿಸಿದರು. ಕೊರ್ನಾಯ ಪದ್ಮನಾಭ ರಾವ್ ದಂಪತಿ ಶ್ರೀಗಳ ಮಾಲಿಕೆ ಮಂಗಳಾರತಿ ನೆರವೇರಿಸಿದರು. ಬ್ರಹ್ಮಸ್ಥಾನ ಅರ್ಚಕ ಗುರುರಾಜ ಆಚಾರ್ಯ, ಪಡುಬಿದ್ರಿ ಶ್ರೀ ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ, ಖಡ್ಗೇಶ್ವರಿ ಬ್ರಹ್ಮಸ್ಥಾನ ಪಾತ್ರಿಗಳಾದ ಸುರೇಶ್ ರಾವ್, ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್, ಗುರಿಕಾರರಾದ ಬಾಲಪ್ಪ ನಟರಾಜ ಪಿ. ಎಸ್., ಮುರುಡಿ ಜಗದೀಶ ರಾವ್, ಶ್ರೀ ಖಡ್ಗೇಶ್ವರಿ ವನದುರ್ಗಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್, ಕೋಶಾಧಿಕಾರಿ ವೈ.ಸುರೇಶ್ ರಾವ್, ಟ್ರಸ್ಟಿಗಳಾದ ಶ್ರೀನಿವಾಸ ರಾವ್, ಪಿ.ಎಸ್.ರಾಘವೇಂದ್ರ ರಾವ್, ರವೀಂದ್ರನಾಥ್ ಪಿ.ಎಚ್. ಇದ್ದರು.