ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಅರ್ಪಣಾ ಭಾವ : ರೆಡ್‌ಕ್ರಾಸ್ ಪ್ರೇರಣಾ ಶಿಬಿರ ಉದ್ಘಾಟಿಸಿ ಡಾ.ಕೆ.ವಿ.ರಾವ್ ಅಭಿಪ್ರಾಯ

Gur_redcross
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಅರ್ಪಣಾಭಾವದಿಂದ ಕೆಲಸ ಮಾಡುವ ತಂಡವೊಂದು ನಮ್ಮಲ್ಲಿದೆ ಎಂಬುದಕ್ಕೆ ಸಂತೋಷವಾಗುತ್ತಿದೆ. ರೆಡ್‌ಕ್ರಾಸ್ ಸೊಸೈಟಿ ಪ್ರತಿಯೊಬ್ಬರೂ ಆರೋಗ್ಯದಿಂದ ಬದುಕಲು ನೆರವಾಗುವ ಹಾಗೂ ಜೀವ ರಕ್ಷಿಸುವ ಸಂಸ್ಥೆಯಾಗಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಶಾಖೆ ಮತ್ತು ಕರ್ನಾಟಕ ರಾಜ್ಯ ಶಾಖೆ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಯುವ ರೆಡ್‌ಕ್ರಾಸ್ ವಿಭಾಗದ ಸಹಯೋಗದಲ್ಲಿ ಸೆ.22ರವರೆಗೆ ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿರುವ 3 ದಿನಗಳ ಮೈಸೂರು ವಿಭಾಗ ಮಟ್ಟದ ಯುವ ರೆಡ್‌ಕ್ರಾಸ್ ಪ್ರೇರಣಾ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಐಆರ್‌ಸಿಎಸ್(ಕೆಎಸ್‌ಬಿ) ಬೆಂಗಳೂರು ಖಜಾಂಚಿ ಯತೀಶ್ ಬೈಕಂಪಾಡಿ ಮಾತನಾಡಿದರು. ಐಆರ್‌ಸಿಎಸ್ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಟ ರಾಮದಾಸ್ ಜಾನಪದ ಗೀತೆ ಹಾಡಿದರು. ಸುರತ್ಕಲ್ ಮದ್ಯ ಗ್ರಾಮ ಮತ್ತು ಇತರ ಭಾಗದ 20ಕ್ಕೂ ಹೆಚ್ಚು ಮೂಲ ಆದಿವಾಸಿ ಕೊರಗ ಕುಟುಂಬಗಳಿಗೆ ರೆಡ್‌ಕ್ರಾಸ್ ಸೊಸೈಟಿ ವತಿಯಿಂದ ಕಿಚನ್ ಕಿಟ್ ವಿತರಿಸಲಾಯಿತು. ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಐಆರ್‌ಸಿಎಸ್ ದ.ಕ ಜಿಲ್ಲಾ ಆಡಳಿತ ಸಮಿತಿ ಸದಸ್ಯರಾದ ಮೋಹನ್ ಶೆಟ್ಟಿ ಕೆ., ಡಾ.ಸುಮನಾ ಬಿ., ಗುರುದತ್ತ ಎಂ.ನಾಯಕ್ ಉಪಸ್ಥಿತರಿದ್ದರು. ಐಆರ್‌ಸಿಎಸ್ ದ.ಕ ಜಿಲ್ಲಾ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಸ್ವಾಗತಿಸಿದರು. ಯೂತ್ ರೆಡ್‌ಕ್ರಾಸ್ ಮಂಗಳೂರು ಅಧ್ಯಕ್ಷ ಸಚೇತ್ ಸುವರ್ಣ ನಿರೂಪಿಸಿದರು. ವಿಶ್ವವಿದ್ಯಾಲಯದ ವೈಆರ್‌ಸಿ ನೋಡೆಲ್ ಅಧಿಕಾರಿ ಡಾ.ಗಾಯತ್ರಿ ಎನ್. ವಂದಿಸಿದರು. ನಟೇಶ್, ಡಾ.ಶ್ರೀಕಾಂತ್, ದೀಪಿಕಾ, ಸುಕನ್ಯಾ, ದೀಕ್ಷಿತಾ, ರೋಶನ್ ಮತ್ತಿತರರು ಸಹಕರಿಸಿದರು.

ವಿವಿಧ ಕಾರ್ಯಕ್ರಮ ಆಯೋಜನೆ

ಮೂರು ದಿನಗಳ ಯುವ ಪ್ರೇರಣಾ ಶಿಬಿರದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಬಗ್ಗೆ ಮಾಹಿತಿ, ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ, ಪರಿಸರ ಕಾಳಜಿ, ಸಾಮಾಜಿಕ ಸೇವೆ, ಮನೋಬಲ ಹೆಚ್ಚಿಸುವ ಸ್ಪರ್ಧೆಗಳು, ರಕ್ತದಾನದ ಮಹತ್ವ, ಸಾಂಸ್ಕೃತಿಕ ಕಾರ್ಯಕ್ರಮ, ಯೋಗದಂತಹ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ರೆಡ್‌ಕ್ರಾಸ್ ಸೊಸೈಟಿ ಮಾನವೀಯ ನೆಲೆಯಲ್ಲಿ ತನ್ನ ಕೆಲಸ ವಿಸ್ತರಿಸಿದೆ. ಉತ್ತಮ ಆರೋಗ್ಯ, ಉತ್ತಮ ಸಂಸ್ಕಾರವಿದ್ದರೆ ಜಗತ್ತಿನ ಎಲ್ಲಿ ಬೇಕಾದರೂ ಬದುಕಬಹುದು. ಪ್ರೇರಣಾ ಶಿಬಿರದ ಮೂಲಕ ಪರಸ್ಪರ ಗೆಳೆತನ, ನೆರವಿನಂತಹ ಉದಾತ್ತ ಮನಃಸ್ಥಿತಿ ಬೆಳೆಸಿಕೊಳ್ಳಬೇಕು. ಉತ್ತಮ ಸಂಸ್ಕೃತಿ ರೂಢಿಸಿಕೊಂಡು, ಮನೆಯಿಂದಲೇ ಮಾನವೀಯತೆ ಬೆಳೆಸಿಕೊಳ್ಳಬೇಕು. ಸಿಎ ಶಾಂತಾರಾಮ ಶೆಟ್ಟಿ, ಅಧ್ಯಕ್ಷರು, ಐಆರ್‌ಸಿಎಸ್ ದಕ್ಷಿಣ ಕನ್ನಡ ಜಿಲ್ಲೆ

ಸಿಎ ಶಾಂತಾರಾಮ ಶೆಟ್ಟಿ, ಅಧ್ಯಕ್ಷರು, ಐಆರ್‌ಸಿಎಸ್ ದಕ್ಷಿಣ ಕನ್ನಡ ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,500 ಮೂಲ ನಿವಾಸಿಗರಿದ್ದಾರೆ. ಅವರ ಶ್ರೇಯೋಭಿವೃದ್ಧಿಗಾಗಿ ಸಂಸ್ಥೆ ಕೆಲಸ ಮಾಡುತ್ತಿದೆ. ದೇಶದಲ್ಲಿ ಒಟ್ಟು 750 ಮೂಲ ನಿವಾಸಿ ಜನಾಂಗ ಗುರುತಿಸಲಾಗಿದ್ದು, ಅದರಲ್ಲಿ ರಾಜ್ಯದಿಂದ 51 ಸಮುದಾಯಗಳು ಸೇರಿಕೊಂಡಿವೆ. ಸರ್ಕಾರವು ರಾಜ್ಯದಲ್ಲಿ ಜೇನು ಕುರುಬರು ಮತ್ತು ಕೊರಗ ಸಮುದಾಯವನ್ನು ಅತಿ ಹಿಂದುಳಿದ ಮೂಲ ನಿವಾಸಿ ಸಮುದಾಯವೆಂದು ಗುರುತಿಸಿದೆ. ಡಾ.ಸುಮನಾ ಬಿ., ಸದಸ್ಯೆ, ಐಆರ್‌ಸಿಎಸ್ ದ.ಕ ಜಿಲ್ಲಾ ಆಡಳಿತ ಸಮಿತಿ ಸದಸ್ಯೆ

ಡಾ.ಸುಮನಾ ಬಿ., ಸದಸ್ಯೆ, ಐಆರ್‌ಸಿಎಸ್ ದ.ಕ ಜಿಲ್ಲಾ ಆಡಳಿತ ಸಮಿತಿ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net