ವಿಗ್ರಹ ಆರಾಧನೆಗೆ ಶ್ರದ್ಧೆ ಭಕ್ತಿ ನಂಬಿಕೆಯೇ ಅಡಿಗಲ್ಲು

6hgr1
Published on

ಹಲಗೂರು: ಭಗವಂತನ ವಿಗ್ರಹ ರೂಪಕ್ಕೆ ಶ್ರದ್ಧೆ ಭಕ್ತಿ ನಂಬಿಕೆ ಅಡಿಗಲ್ಲು. ಬರಿ ಕಣ್ಣಿನಲ್ಲಿ ನೋಡಿದರೆ ಕಲ್ಲು, ನಂಬಿಕೆ-ಭಕ್ತಿಯಿಂದ ನೋಡಿದರೆ ಭಗವಂತನ ರೂಪವನ್ನು ಕಾಣಬಹುದು ಎಂದು ಸಿದ್ದಗಂಗಾ ಮಠದ ಸ್ವಾಮೀಜಿ ಸಿದ್ದಲಿಂಗ ಶ್ರೀ ಅಭಿಪ್ರಾಯ ಪಟ್ಟಿದ್ದಾರೆ.

ಸಮೀಪದ ಬ್ಯಾಡರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ರಾಮಮಂದಿರ ದೇವಸ್ಥಾನದಲ್ಲಿ ಗಣಪತಿ, ಶಿವ, ನವಗ್ರಹ ಹಾಗೂ ಶ್ರೀರಾಮದೇವರ ಶಿಲಾ ಪ್ರತಿಷ್ಠಾನ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ನಮ್ಮ ಬದುಕಿನ ಸುಖ, ದುಃಖ, ಯಶಸ್ಸನ್ನು ಎಲ್ಲ ಸಂದರ್ಭಗಳಲ್ಲೂ ನಾವು ಭಗವಂತನನ್ನು ಸ್ಮರಿಸುತ್ತೇವೆ. ಹಾಗಾಗಿ ದಾರ್ಶನಿಕರು ಭಾರತದ ಆತ್ಮವೇ ಆಧ್ಯಾತ್ಮ ಎನ್ನುತ್ತಾರೆ. ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳ ಮೇಲೆ ಪಾಶ್ಚಿಮಾತ್ಯರು ದಾಳಿ ಮಾಡಿದಾಗ ಆ ರಾಷ್ಟ್ರ ಧರ್ಮ ಸಂಸ್ಕೃತಿ ನಾಶವಾಗಿ ಹೋಗಿದೆ. ಆದರೆ ಭಾರತದ ಮೇಲು ಹಲವು ಬಾರಿ ಪಾಶ್ಚಿಮಾತ್ಯರ ದಾಳಿ ನಡೆದಾಗ ಇಲ್ಲಿಯ ಧರ್ಮ ಸಂಸ್ಕೃತಿ ನಾಶವಾಗಿಲ್ಲ. ಭಾರತ ಜಗತ್ತಿನ ಎಲ್ಲ ರಾಷಟ್ರೆಗಳ ಮುಂದೆ ಜಗದ್ವಿಖ್ಯಾತವಾದ, ವಿಶ್ವ ಮಾನ್ಯ, ಅಗ್ರಗಣ್ಯ ಸ್ಥಾನ ಮಾನ ಪಡೆದಿದೆ. ನಾವು ಯಾವುದೇ ಸಮಾರಂಭಗಳನ್ನು ನಡೆಸಿದರು ಮೊದಲು ಧರ್ಮಸಭೆ ನಡೆಸುತ್ತೇವೆ. ಇದರ ಮೂಲ ಉದ್ದೇಶ ಭಗವಂತನ ಸ್ಮರಣೆ, ಆದರೆ ಈಗ ನಮ್ಮ ಪ್ರಶ್ನೆ ಈ ಭಗವಂತ ಎಂದರೆ ಯಾರು? ಅವರು ಎಲ್ಲಿರುತ್ತಾರೆ ?ಎಂಬುದು. ಶಿವ, ವಿಷ್ಣು, ಗಣಪತಿ, ಬಸವಾದಿ ಶರಣರು, ದಾಸರು ಗುರು, ಆಚಾರ್ಯರು, ಮುಂತಾದ ಮಹಾಪುರುಷ ರನ್ನು ಕುರಿತು ಧ್ಯಾನಿಸಿದಾಗ ನಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕಿತು, ಆ ಮಹಾಪುರುಷರೇ ದೇವರಾದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಅದ್ಭುತವಾದ ಚಿಂತನೆ ಮಾಡಿದರು. ಎಲ್ಲಿ ನೋಡಿದರು ನೀನೇ ದೇವ, ನೀನೇ ಭಗವಂತ, ಸರ್ವ ವ್ಯಾಪಿಯಾದ ನೀನು ಪಂಚಭೂತಗಳಲ್ಲಿ ಇರುವೆ. ಆ ಪಂಚಭೂತಗಳು ಮನುಷ್ಯನ ಅಂತರಂಗದಲ್ಲೂ ಇವೆ. ಮನುಷ್ಯನ ಒಳಗೂ ಹೊರಗೂ ಭಗವಂತನಿದ್ದಾನೆ ಎಂದರು. ನೀವು ಕಟ್ಟಿರುವ ದೇವಾಲಯಕ್ಕಿಂತ ಯಾರ ಅಂತರಂಗ ಪರಿಶುದ್ಧವಾಗಿರುತ್ತದೆಯೋ, ಯಾರ ಹೃದಯದಲ್ಲಿ ನಿರ್ಮಲವಾದ ಪ್ರೀತಿ ವಿಶ್ವಾಸ ತುಂಬಿರುತ್ತದೆಯೋ, ಬೇರೆಯವರನ್ನು ಕಂಡು ಮರುಗುತ್ತದೆಯೋ ನಿರಹಂಕಾರದಿಂದ ಇರುವ ಹೃದಯದಲ್ಲಿ ಭಗವಂತ ನೆಲೆಸಲು ಸೂಕ್ತ ಸ್ಥಳ. ಭಗವಂತನ ವಿಗ್ರಹ ರೂಪಕ್ಕೆ ಶ್ರದ್ಧೆ ಭಕ್ತಿ ನಂಬಿಕೆಯೇ ಅಡಿಗಲ್ಲು ಬರೀ ಕಣ್ಣಿನಿಂದ ನೋಡಿದರೆ ಕಲ್ಲು ನಂಬಿಕೆಯಿಂದ ನೋಡಿದರೆ ಭಗವಂತನ ರೂಪ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗವಿಮಠದ ಷಡಕ್ಷರ ಸ್ವಾಮೀಜಿ, ಹಂಗ್ರಾಪುರದ ಸ್ವಾಮೀಜಿ ಮತ್ತು ರಾಮ ಮಂದಿರ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾದ ಜಯರಾಮು ಮತ್ತು ಎಂ.ಎನ್.ನಾಗರಾಜ್, ಸುರೇಶ, ಕಾಳೇಗೌಡ, ರವಿ ಕುಮಾರ್, ಮಾದೇಗೌಡ, ಶಿವಪ್ರಸಾದ್, ಬಸವ, ಮರಿಸ್ವಾಮಿ, ಹಾಡ್ಲಿ ಪ್ರಕಾಶ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net