ಹಾಸನಾಂಬೆ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು

ಹಾಸನಾಂಬೆ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು
Published on

ಹಾಸನ: ಹಾಸನಾಂಬ ದೇವಾಲಯಕ್ಕೆ ಸಾಗರೋಪಾದಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದಿದ್ದು, ಎಲ್ಲ ಸರದಿ ಸಾಲುಗಳು ಭರ್ತಿಯಾಗಿದ್ದವು ಎಂದು ಡಿಸಿ ಲತಾಕುಮಾರಿ ಹೇಳಿದರು.

ದೇವಾಲಯ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಕ್ಷಾಂತರ ಭಕ್ತರ ಆಗಮನ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಶುಕ್ರವಾರ ಮಧ್ಯಾಹ್ನದವರೆಗೆ 1.60 ಲಕ್ಷ ಜನರು ಆಗಮಿಸಿದ್ದು, ಇಂದು ಮೂರು ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆಯುವ ಸಾಧ್ಯತೆ ಇದೆ. 1000, 300 ರೂ. ವಿಶೇಷ ದರ್ಶದ ಸಾಲುಗಳು ಕೂಡ ಭರ್ತಿಯಾಗಿವೆ. ನಾನೇ ಧರ್ಮ ದರ್ಶನದ ಸಾಲಿನಲ್ಲಿ ಬಂದು ಮೂರು ಗಂಟೆ ನಂತರ ದರ್ಶನ ಪಡೆದಿದ್ದೇನೆ. ಈಗ ಆ ರೀತಿ ಇಲ್ಲ, ಸಮಯ ಹೆಚ್ಚಾಗುತ್ತಿದೆ. ಕೆಲವು ಭಕ್ತರು ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ.

ಬೆಳಗ್ಗೆ 7 ಗಂಟೆಗೆ ಸರತಿ ಸಾಲಿನಲ್ಲಿ ನಿಂತವರು ಸಂಜೆ 4 ಗಂಟೆಗೆ ದೇವಿ ದರ್ಶನ ಪಡೆದು ಹೊರ ಬಂದಿದ್ದಾರೆ. ಗರ್ಭಗುಡಿ ಬಳಿ ನೂಕುತ್ತಿದ್ದಾರೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಒಂದು ನಿಮಿಷಕ್ಕೆ 120-150 ಭಕ್ತರನ್ನು ಕಳುಹಿಸಲಾಗುತ್ತಿದೆ. ಇಲ್ಲವಾದಲ್ಲಿ ಲಕ್ಷಾಂತರ ಜನ ದರ್ಶನ ಪಡೆಯಲು ಸಾಧ್ಯವಿಲ್ಲ. ಭಕ್ತರು ಶಾಂತಿಯಿಂದ ಸಹಕರಿಸಬೇಕು. ಯಾರಾದರೂ ತಳ್ಳಿದ್ದರೆ ಕ್ಷಮೆ ಇರಲಿ. ಒಂದೆರಡು ಸೆಕೆಂಡ್‌ನಲ್ಲಿ ಮಾತ್ರ ದೇವಿ ದರ್ಶನ ಪಡೆಯಬಹುದು.

1000 ರೂ. 300 ರೂ. ವಿಶೇಷ ದರ್ಶನದ ಟಿಕೆಟ್ ತೆಗೆದುಕೊಂಡು ದೇವಿ ದರ್ಶನಕ್ಕೆ ಬಂದವರು ಅಸಮಾಧಾನ ಹೊರಹಾಕಿದ್ದಾರೆ. ನಾವು ಯಾರಿಗೂ ಬಲವಂತ ಮಾಡಿಲ್ಲ. ಕೆಲವರಿಗೆ ಅನುಕೂಲವಾಗಲಿ ಎಂದು ಮಾಡಿದ್ದೇವೆ ಹೊರತು ಹಣ ಮಾಡಲು ಅಲ್ಲ ಎಂದರು.

1000 ರೂ. ಕೊಟ್ಟು ಬಂದರೆ ಸರತಿ ಸಾಲು ಕಡಿಮೆ ಇರುತ್ತದೆ ಅಷ್ಟೇ. ಏನೇನೋ ನಿರೀಕ್ಷೆಗಳನ್ನು, ಭ್ರಮೆ ಇಟ್ಟುಕೊಂಡು ಬರಬೇಡಿ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಗಳನ್ನು ಮಾಡಿದ್ದೇವೆ. ಎರಡರಿಂದ ಮೂರು ಪಟ್ಟು ಹೆಚ್ಚು ಭಕ್ತರು ಬಂದಿದ್ದಾರೆ. ಭಕ್ತರು ಸುರಕ್ಷತೆಯೇ ನಮ್ಮ ಗುರಿ. ಮುಂದಿನ ದಿನಗಳಲ್ಲಿ ಒಂದು ದಿನದಲ್ಲಿ ಐದು ಲಕ್ಷ ಮೀರಬಹುದು. ಆದರೂ ಎಲ್ಲ ಅಧಿಕಾರಿಗಳು ಶ್ರಮಿಸುತ್ತಿದ್ದೇವೆ ಎಂದರು.

ದರ್ಶನಕ್ಕೆ ಬರುವವರು ಮೊದಲೇ ಮಾನಸಿಕವಾಗಿ ಸಿದ್ಧರಾಗಿರಬೇಕು. ಎಷ್ಟು ಸಮಯಕ್ಕೆ ದರ್ಶನ ಆಗುತ್ತೆ ಎಂಬುದನ್ನು ಎಲ್ಲ ಸಾಲುಗಳಲ್ಲಿ ಈಗಾಗಲೇ ಬೋರ್ಡ್ ಹಾಕಿದ್ದೇವೆ. ಎಷ್ಟೊತ್ತಿಗೆ ದರ್ಶನ ಸಮಯ ಎಂದು ಬೋರ್ಡ್ ಕೂಡ ಹಾಕಿದ್ದೇವೆ.

ಧರ್ಮ ದರ್ಶನದ ಸಾಲಿನಲ್ಲಿ ಬರುತ್ತಿರುವವರಿಗೆ 7 ರಿಂದ 8 ಗಂಟೆ, 1000 ರೂ. ಸಾಲಿನಲ್ಲಿ ಬರುತ್ತಿರುವವರಿಗೆ 3 ರಿಂದ 4 ಗಂಟೆ, 300 ರೂ. ಸಾಲಿನಲ್ಲಿ ಬರುತ್ತಿರುವವರಿಗೆ 6 ರಿಂದ 7 ಗಂಟೆ ಸಮಯ ಆಗುತ್ತಿದೆ ಎಂದು ವಿವರಿಸಿದರು.

ಇಂದು ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ. ಸಿಗುವುದು ಕೆಲ ಸೆಕೆಂಡ್‌ಗಳು ಮಾತ್ರ. ಪೂರ್ವ ತಯಾರಿ ಮಾಡಿಕೊಂಡು ಬಂದು ಆಶೀರ್ವಾದ ಪಡೆಯಿರಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net