

ಹರಿಹರ: ತಾಲೂಕಿನಾದ್ಯಂತ ಶನಿವಾರ ಶ್ರೀ ಗಣೇಶ ಮಹೋತ್ಸವದ ಅಂಗವಾಗಿ ಬಡಾವಣೆಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ವಿನಾಯಕನ ವಿವಿಧ ಭಂಗಿಗಳ ಮೂರ್ತಿಗಳು ಭಕ್ತರ ಕಣ್ಮನ ಸೆಳೆದವು.
ಒಂದು ದಿನದಿಂದ 30 ದಿನಗಳವರೆಗೂ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ನಂತರ ಅದ್ದೂರಿ ಮೆರವಣಿಗೆ, ಶೋಭಾಯಾತ್ರೆ ಮೂಲಕ ತುಂಗಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಶನಿವಾರ ನಗರದ ವಿವಿಧ ಸಂಘಟನೆಯವರು ಬಾಜಾ ಭಜಂತ್ರಿ, ಡೊಳ್ಳು, ಹಲಗೆ ಬ್ಯಾಂಡ್‌ಸೆಟ್, ಸಮಾಳ, ನಂದಿಕೋಲು ಭಜನೆ ಸೆಟ್, ಡ್ರಮ್ ಸೆಟ್ ಸೇರಿದಂತೆ ವಿವಿಧ ಸಂಸ್ಕೃತಿ ಕಲಾ ತಂಡದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಶೃಂಗಾರಗೊಂಡ ಪೆಂಡಾಲ್‌ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದರು.
ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಸಂಘದಿಂದ ಹರಿಹರೇಶ್ವರ ದೇವಸ್ಥಾನ ಇತಿಹಾಸ ಕುರಿತು ಪ್ರದರ್ಶನ ಏರ್ಪಡಿಸಲಾಗಿದೆ, ಹಿಂದು ಜಾಗರಣಾ ವೇದಿಕೆಯಡಿ ನಗರದ ಪೇಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಹಿಂದು ಮಹಾ ಗಣಪತಿ ಹೆಸರಿನಲ್ಲಿ 4ನೇ ವರ್ಷ ಆಚರಣೆ ಮಾಡುತ್ತಿದ್ದು, 23 ನೇ ದಿನಕ್ಕೆ ಬೃಹತ್ ಶೋಭಾಯಾತ್ರೆಯೊಂದಿಗೆ ವಿಸರ್ಜನೆ ಮಾಡಲಾಗುವುದು.
ಹರಿಹರದ ನಡುವಲ ಪೇಟೆಯಲ್ಲಿ ನಡುವಲಪೇಟೆ ಯುವಕ ಸಂಘ ಸ್ಥಾಪಿಸಿರುವ ಬಾಲ ಲಡ್ಡು ಉಂಡೆ ಗಣಪತಿ, ಹೊಸ ಭರಂಪುರದಲ್ಲಿ ಹೊಸ ಭರಂಪುರ ಯುವಕ ಸಂಘ ಗ್ರಾಮದೇವತಾ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಿರುವ ತಾಲೂಕಿನಲ್ಲಿಯೇ ಅತಿ ಎತ್ತರದ ಹರಿಹರ ಕಾ ರಾಜಾ ಮಹಾ ಗಣಪತಿ ಸೇರಿದಂತೆ ವಿವಿಧ ಗಣೇಶ ಮೂರ್ತಿಗಳು ಜನಮನ ಸೆಳೆಯುತ್ತಿವೆ.