

ರಾಮನಗರ : ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಭಕ್ತರಿಗೆ ವಿಭೂತಿಕೆರೆ, ಅರ್ಚಕರಹಳ್ಳಿ ಸೇರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ಅನ್ನಸಂತರ್ಪಣೆ ಏರ್ಪಡಿಸಿ, ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು.
ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿಯಂದು ಜಾತ್ರೆ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ರಾಮನಗರ ಜಿಲ್ಲೆಯಿಂದ ಅದರಲ್ಲೂ ತಾಲೂಕಿನ ಪ್ರತೀ ಗ್ರಾಮಗಳಿಂದಲೂ ಸಾವಿರಾರು ಭಕ್ತರು ಕನಕಪುರ ತಾಲೂಕಿನ ಏಳಗಳ್ಳಿಯಿಂದ ಕಾವೇರಿ ನದಿ ದಾಟಿ ಮಹದೇಶ್ವರನ ದರ್ಶನ ಪಡೆಯುತ್ತಾರೆ.
ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗುವಾಗ ಮಾರ್ಗಮಧ್ಯದ ಗ್ರಾಮಗಳಲ್ಲಿ ಪೂಜೆ, ಅನ್ನಸಂತರ್ಪಣೆ ಇರಲಿದ್ದು, ಅದರಂತೆ ತಾಲೂಕಿನ ಅಂಜನಾಪುರ, ವಿಭೂತಿಕೆರೆ, ಅರ್ಚಕರಹಳ್ಳಿ, ದೊಡ್ಡಗಂಗವಾಡಿ, ಮಾಯಗಾನಹಳ್ಳಿ, ಚನ್ನಮಾನಹಳ್ಳಿ, ಸಂಗನಬಸನದೊಡ್ಡಿ, ಮಾದಾಪುರ, ಬಿಡದಿ, ಕೂನಮುದ್ದನಹಳ್ಳಿ, ಲಕ್ಷ್ಮೀಪುರ, ಕನಕಪುರ ಸರ್ಕಲ್, ಬನ್ನಿಕುಪ್ಪೆ, ಅಂಕನಹಳ್ಳಿ, ಕೈಲಾಂಚ, ಬಿಳಗುಂಬ, ಹುಣಸನಹಳ್ಳಿ, ತುಂಬೇನಹಳ್ಳಿ, ವಿರುಪಸಂದ್ರ, ಚಿಕ್ಕಗಂಗವಾಡಿ, ಜಾಲಮಂಗಲ, ತಾಳವಾಡಿ, ಸುಗ್ಗನಹಳ್ಳಿ, ಕೇತೋಹಳ್ಳಿ, ಅವ್ವೇರಹಳ್ಳಿ, ಹುಲಿಕೆರೆ, ಗುನ್ನೂರು, ವಡ್ಡರಹಳ್ಳಿ, ನಾಗೋಹಳ್ಳಿ, ಹೊಸದೊಡ್ಡಿ, ಕವಣಾಪುರ, ಕೋಟಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಜನಜಂಗುಳಿ
ಕಾಲ್ನಡಿಗೆಯಲ್ಲಿ ತೆರಳಿದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದರು. ತೆಗೆ ಮಕ್ಕಳೂ ಹೆಜ್ಜೆಹಾಕುತ್ತಿದ್ದ ದೃಶ್ಯಗಳು ಕಂಡುಬಂದವು. ಕನಕಪುರದ ಏಳಗಳ್ಳಿಗೆ ತೆರಳಲು ರಾಮನಗರ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಲ್ಲಿ ಜನ ಜಂಗುಳಿ ಏರ್ಪಟ್ಟಿತ್ತು. ಆಟೋ ಸೇರಿ ಖಾಸಗಿ ವಾಹನಗಳು ರಸ್ತೆಗಿಳಿದು ಜನರನ್ನು ಕರೆದೊಯ್ಯುತ್ತಿರುವುದು ಸಾಮಾನ್ಯವಾಗಿತ್ತು.
ರೋಟರಿ ಸಿಲ್ಕ್ ಸಿಟಿಯಿಂದ ನಿರಂತರ ದಾಸೋಹ
ಇಂದಿನಿಂದ ಫೆ.24ರ ಸೋಮವಾರದವರೆಗೆ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಹೋಗುವ ಭಕ್ತರಿಗೆ ಹನೂರು ತಾಲೂಕು, ಕೌದಳ್ಳಿ ಬಳಿಯ ಮಲ್ಲಯ್ಯನಪುರ ಸಮೀಪ ದಿನದ 24 ಗಂಟೆಯೂ ಅನ್ನದಾಸೋಹ ಇದ್ದು, ಕಾಫಿ, ಟೀ, ಮಜ್ಜಿಗೆ, ಎಲೆ ಅಡಿಕೆ, ಬೆಳಗ್ಗೆ, ಮಧ್ಯಾಹ್ನ ರಾತ್ರಿ ಊಟದ ವ್ಯವಸ್ಥೆಯೊಂದಿಗೆ ಔಷಧ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಇದು 6ನೇ ವರ್ಷದ ಸೇವೆಯಾಗಿದ್ದು, ಕಾಲ್ನಡಿಗೆಯಲ್ಲಿ ಬರುವ ಭಕ್ತರು ಸೇವೆಯನ್ನು ಉಪಯೋಗಿಸಕೊಳ್ಳಬೇಕು ಎನ್ನುತ್ತಾರೆ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಕ್ಯಾಸಾಪುರ ಶ್ರೀಧರ್.