ಪಾದಯಾತ್ರೆಯಲ್ಲಿ ಮ.ಬೆಟ್ಟಕ್ಕೆ ತೆರಳುತ್ತಿರುವ ಭಕ್ತರು

oppo_2
oppo_2
Published on

ಹನೂರು: ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಇನ್ನು 15 ದಿನ ಬಾಕಿ ಇರುವಾಗಲೇ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಕಳೆದ 2 ದಿನಗಳಿಂದ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಪಾದಯಾತ್ರೆಯ ಮೂಲಕ ಮ.ಬೆಟ್ಟಕ್ಕೆ ತೆರಳುತ್ತಿದ್ದಾರೆ.


ಮ.ಬೆಟ್ಟದಲ್ಲಿ 5 ದಿನಗಳ ಕಾಲ ನಡೆಯುವ ದೀಪಾವಳಿ ಜಾತ್ರೆಗೆ ಪ್ರತಿ ವರ್ಷ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆಯ ಮೂಲಕ ಮ.ಬೆಟ್ಟಕ್ಕೆ ಆಗಮಿಸಿ ಅಲ್ಲಿಯೇ ನಾಲ್ಕೈದು ದಿನಗಳ ಕಾಲ ವಾಸ್ತವ್ಯ ಹೂಡುತ್ತಾರೆ. ಈ ವೇಳೆ ನಡೆಯುವ ವಿವಿಧ ಉತ್ಸವಗಳು, ಸೇವೆಗಳು ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆಯುತ್ತಾರೆ.


ಈ ಹಿಂದೆ ಜಾತ್ರೆಯೂ ಇನ್ನೇನೂ ನಾಲ್ಕೈದು ದಿನಗಳು ಬಾಕಿ ಇರುವಾಗ ಮಾತ್ರ ಭಕ್ತರು ಪಾದಯಾತ್ರೆಯನ್ನು ಕೈಗೊಂಡು ಜಾತ್ರಾ ಸಮಯದಲ್ಲಿ ಮ.ಬೆಟ್ಟದಲ್ಲೇ ತಂಗುತ್ತಿದ್ದರು. ಆದರೆ ಈ ಬಾರಿ ಜಾತ್ರೆಯು ಅ.29ರಿಂದ ಆರಂಭವಾಗಲಿದ್ದು, ಇನ್ನು 15 ದಿನ ಬಾಕಿ ಇದೆ. ಜಾತ್ರಾ ವೇಳೆ ಹೆಚ್ಚು ಜನಸಂದಣಿಯಾಗುವ ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಕೊಳ್ಳೇಗಾಲ-ಹನೂರು ಮಾರ್ಗವಾಗಿ ಕಾಲ್ನಡಿಗೆ ಮೂಲಕ ಮ.ಬೆಟ್ಟಕ್ಕೆ ತೆರಳುತ್ತಿದ್ದು, ತಾಳುಬೆಟ್ಟದಲ್ಲಿ ರಾತ್ರಿ ವಾಸ್ತವ್ಯ ಹೂಡಿ ಮ.ಬೆಟ್ಟಕ್ಕೆ ತಲುಪಲಿದ್ದಾರೆ.


ಮಳೆಯನ್ನು ಲೆಕ್ಕಿಸದೇ ತೆರಳುತ್ತಿರುವ ಭಕ್ತರು: ಕಳೆದ 2 ದಿನಗಳಿಂದ ಚಾಮರಾಜನಗರ ಸೇರಿದಂತೆ ಮೈಸೂರು, ಮಂಡ್ಯ, ರಾಮನಗರ, ಎಚ್.ಡಿ ಕೋಟೆ, ನಂಜನಗೂಡು, ನರಸೀಪುರ ಹಾಗೂ ಮಳವಳ್ಳಿ ಕಡೆಗಳಿಂದ ಹೆಚ್ಚಿನ ಭಕ್ತರು ಮ.ಬೆಟ್ಟಕ್ಕೆ ತೆರಳುತ್ತಿದ್ದಾರೆ. ಈ ಬಾರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದು ಒಂದೆಡೆಯಾದರೆ, ವಿವಿಧ ಗ್ರಾಮದ ಗ್ರಾಮಸ್ಥರು ಸರದಿ ರೂಪದಲ್ಲಿ ಹಣವನ್ನು ಸಂಗ್ರಹಿಸಿ ಮಾರ್ಗಮಧ್ಯದಲ್ಲಿ ಅಡುಗೆ ತಯಾರಿಸಿ ಒಟ್ಟಿಗೆ ಸೇರಿ ಸಹಭೋಜನಾ ಸ್ವೀಕರಿಸಿ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ತಂಡೋಪತಂಡವಾಗಿ ತೆರಳುತ್ತಿದ್ದಾರೆ. ಮಾದಪ್ಪನ ದೇವರ ಗುಡ್ಡರು ಕಂಸಾಳೆ ಬಾರಿಸುತ್ತಾ ಮಾದಪ್ಪನ ಹಾಡನ್ನು ಹಾಡುತ್ತಾ ತೆರಳಿದರೆ, ಮಹಿಳೆಯರ ಗುಂಪು ಉಘೇ ಮಾದಪ್ಪ, ಜೈ ಮಹತ್ ಮಲೆಯಾ ಘೋಷಣೆಗಳನ್ನು ಕೂಗುತ್ತಾ ಉತ್ಸಾಹದಿಂದ ಮ.ಬೆಟ್ಟದತ್ತ ಹೆಜ್ಜೆ ಹಾಕುತ್ತಿರುವುದು ಕಳೆದ 2 ದಿನಗಳಿಂದ ಹನೂರು ಭಾಗದಲ್ಲಿ ಕಂಡುಬರುತ್ತಿದೆ. ಆದರೆ ಮಳೆಯನ್ನೇ ಲೆಕ್ಕಿಸದೇ ಭಕ್ತರು ಮಾದಪ್ಪನ ನೆನೆದು ಉತ್ಸಾಹದಿಂದ ಮ.ಬೆಟ್ಟದತ್ತ ಹೆಜ್ಜೆ ಹಾಕುತ್ತಿರುವುದು ಮೆಚ್ಚುವ ಸಂಗತಿ.


ಇನ್ನು ದೀಪಾವಳಿ ಜಾತ್ರೆ ಸಮೀಪಿಸುತ್ತಿದ್ದಂತೆಯೇ ಎಂದಿನಂತೆ ಮುಂದಿನ ದಿನಗಳಲ್ಲೂ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗಲಿದ್ದು, ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net