

ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿಯ ಸನ್ನಿಧಿಗೆ ತೆಲಂಗಾಣದ ಭದ್ರಾಚಲಂನ ಸೀತಾಸಮೇತ ರಾಮಚಂದ್ರಪ್ರಭು ದೇವಾಲಯದ ರಥ ಆಗಮಿಸಿ ಭಕ್ತರಿಗೆ ದರ್ಶನ ನೀಡಿತು.
ತೆಲಂಗಾಣ ರಾಜ್ಯದ ಗೋದಾವರಿ ನದಿ ತಟದಲ್ಲಿರುವ ಭದ್ರಾಚಲಂ ಕ್ಷೇತ್ರದ ಶ್ರೀವೈಷ್ಣವ ಸೀತಾ ಸಮೇತ ಶ್ರೀರಾಮಚಂದ್ರ ಪ್ರಭುವಿನ ದೇವಾಲಯ ಶ್ರೀರಾಮಚಂದ್ರನಿಗೆ ಮುಡಿಪಾದ ಶ್ರೀವೈಷ್ಣವ ದೇವಾಲಯವಾಗಿದೆ. ಆಚಾರ್ಯ ರಾಮಾನುಜರ ಸಿದ್ಧಾಂತದ ರೀತ್ಯ ದೇವಾಲಯದಲ್ಲಿ ಪೂಜಾ ಕೈಂಕರ್ಯನಡೆಯುತ್ತಾ ಬಂದಿದ್ದು, ರಾಮಾನುಜರ ಕರ್ಮಭೂಮಿ ಮೇಲುಕೋಟೆಗೂ ಭದ್ರಾಚಲಂಗೂ ಅವಿನಾಭಾವ ಸಂಪರ್ಕವಿದೆ. ಭದ್ರಾಚಲಂ ರಾಮದಾಸರು ದೇವಾಲಯವನ್ನು ನಿರ್ಮಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಭಕ್ತಿಪ್ರಧಾನವಾದ ಸಾವಿರಾರು ಮೇರು ಕೀರ್ತನೆಗಳನ್ನು ರಚಿಸಿ ಶ್ರೀರಾಮನಿಗೆ ಅರ್ಪಿಸಿದ್ದರು. ಇಂತಹ ಮಹತ್ವದ ದೇವಾಲಯದಿಂದ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಲಾದ ಪ್ರಚಾರ ರಥದೊಂದಿಗೆ ಆಗಮಿಸಿದ ಅಧಿಕಾರಿಗಳು ಮತ್ತು ಅರ್ಚಕರು ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಪೂಜೆ ಮಾಡಿಸಿ ಭಕ್ತರಿಗೆ ರಾಮಚಂದ್ರನ ದರ್ಶನ ಮಾಡಿಸಿದರು.
ರಥದ ಜತೆಗೆ ಆಗಮಿಸಿದ್ದ ಭದ್ರಾಚಲಂ ದೇಗುಲದ ಸಿಇಒ ಮತ್ತು ಅರ್ಚಕರು ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗನರಸಿಂಹನ ದರ್ಶನ ಪಡೆದರು. ಮೇಲುಕೋಟೆಗೆ ಆಗಮಿಸಿದ್ದ ಭಕ್ತರು ರಥದಿಂದ ಕೇಳಿಬರುತ್ತಿದ್ದ ವೇದಮಂತ್ರ ಹಾಗೂ ಭದ್ರಚಲರಾಮದಾಸರ ಕರ್ನಾಟಕ ಶಾಸ್ತ್ರೀಯ ಸಂಗೀತ ಕೀರ್ತನೆಯೊಂದಿಗೆ ಸೀತಾ ಮಾತೆಯೊಂದಿಗೆ ವಿರಾಜಮಾನನಾಗಿದ್ದ ರಾಮಚಂದ್ರನ ದರ್ಶನ ಪಡೆದು ಪುಳಕಿತರಾದರು.