ಹೊಳೆಮಲ್ಲೇಶ್ವರ ದೇವಾಲಯಕ್ಕೆ ಭಕ್ತರ ದಂಡು

8 skpp 2
Published on

ಸಕಲೇಶಪುರ: ಶಿವರಾತ್ರಿ ಅಂಗವಾಗಿ ಪಟ್ಟಣದ ಹೊಳೆಮಲ್ಲೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಜಾಗರಣೆಯಲ್ಲಿ ಪಾಲ್ಗೊಂಡರು.


ಹಬ್ಬದ ಅಂಗವಾಗಿ ಶುಕ್ರವಾರ ಮುಂಜಾನೆಯಿಂದಲೇ ಹೋಮ, ಹವನ ನಡೆದ ನಂತರ ಮಹಾರುದ್ರಭೀಷೆಕ ನೆರವೇರಿಸಲಾಯಿತು. ನಂತರ 1208 ಲೀಟರ್ ಹಾಲಿನ ಅಭಿಷೇಕ ಮಾಡಲಾಯಿತು. ಸಂಜೆ 6 ರಾತ್ರಿ 11 ಮಧ್ಯರಾತ್ರಿ 3 ಹಾಗೂ ಮುಂಜಾನೆ 6 ಗಂಟೆಗೆ ನಾಲ್ಕು ಯಾಮಗಳ ಪೂಜೆ ನೆರವೇರಿಸಲಾಯಿತ


ಶುಕ್ರವಾರ ಮುಂಜಾನೆಯಿಂದ ಶನಿವಾರ ಮುಂಜಾನೆಯವರೆಗೆ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮುಖ್ಯರಸ್ತೆ ಝಗಮಗ: ಶಿವರಾತ್ರಿ ಹಬ್ಬದ ವಾರಕ್ಕೂ ಮೊದಲೇ ಸಕಲೇಶ್ವರಸ್ವಾಮಿ ರಥೋತ್ಸವ ನೆರವೇರಿದ್ದು ಜಾತ್ರೆಯ ಅಂಗವಾಗಿ ಹೇಮಾವತಿ ಸೇತುವೆಯಿಂದ ಹೊಸ ಬಸ್ ನಿಲ್ದಾಣದವರೆಗೆ ರಸ್ತೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.


ಇದೇ ಮೊದಲ ಬಾರಿಗೆ ಹೇಮಾವತಿ ಸೇತುವೆಗೆ ಬಣ್ಣ ಬಳಿದು ವಿದ್ಯುತ್ ದೀಪ ಅಳವಡಿಸಿರುವುದರಿಂದ ಪಟ್ಟಣ ಬೆಳಕಿನಿಂದ ಝಗಮಗಿಸುತ್ತಿದೆ.
ಜಾಗರಣೆ ಅಂಗವಾಗಿ ದೇವಾಲಯದ ಆಡಳಿತ ಮಂಡಳಿ ಮಹಾ ಅನ್ನಸಂತರ್ಪಣೆ ಹಮ್ಮಿಕೊಂಡಿತ್ತು. ಶುಕ್ರವಾರ ಸಂಜೆಯಿಂದ ಮುಂಜಾನೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.


ಜನಜಂಗುಳಿ: ಸಕಲೇಶ್ವರಸ್ವಾಮಿ ಜಾತ್ರೆ ವಸ್ತು ಪ್ರದರ್ಶನ ಶಿವರಾತ್ರಿಯಂದು ಕೊನೆಯ ದಿನವಾಗಿರುವುದರಿಂದ ಸಾವಿರಾರು ಜನರು ಆಗಮಿಸಿದ್ದರಲ್ಲದೆ, ಹೊಳೆಮಲ್ಲೇಶ್ವರ ದೇವಸ್ಥಾನದಲ್ಲಿ ದೇಗುಲಕ್ಕೆ ಬಂದಿದ್ದ ಸಾವಿರಾರು ಭಕ್ತರೂ ವಸ್ತು ಪ್ರದರ್ಶನಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಜನಜಂಗುಳಿ ಏರ್ಪಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net