

ಮೂಗೂರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಅಸಡ್ಡೆಯಿಂದ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಡಿ.ಲೋಕೇಶ್ ಆರೋಪಿಸಿದರು.
ಮೂಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 2025-26ನೇ ಸಾಲಿನ ಸಮಗ್ರ ವಾರ್ಷಿಕ ಕ್ರಿಯಾ ಯೋಜನೆ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೇ 300ಕ್ಕೂ ಹೆಚ್ಚು ಇ- ಸ್ವತ್ತಿನ ಅರ್ಜಿಗಳು ಕಡತದಲ್ಲೇ ಧೂಳು ಹಿಡಿದಿದೆ. ತಾಲೂಕಿನ ಇತರ ಪಂಚಾಯಿತಿಗಳಿಗೆ ಇಲ್ಲದ ಕಾನೂನು ಮೂಗೂರು ಗ್ರಾ.ಪಂ.ಗೆ ಇದೆಯೇ ಎಂದು ಪ್ರಶ್ನಿಸಿದರು.
ಎಸ್‌ಸಿ, ಎಸ್ಟಿಗೆ ಮೀಸಲಿಟ್ಟ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದೆ ದುರುಪಯೋಗವಾಗಿದೆ. ಪಿಡಿಒ ಪ್ರಕಾಶ್ ಅವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು, ಎಸ್‌ಸಿ, ಎಸ್ಟಿ ಹಣ ಬಳಕೆ ಬಗ್ಗೆ ತನಿಖೆ ನಡೆಸುವಂತೆ ಪಂಚಾಯಿತಿ ನೋಡಲ್ ಅಧಿಕಾರಿ ರಾಜಣ್ಣ ಅವರಿಗೆ ಗ್ರಾ.ಪಂ. ಮಾಜಿ ಸದಸ್ಯ ಕೃಷ್ಣಸ್ವಾಮಿ ಒತ್ತಾಯಿಸಿದರು.
ಗ್ರಾ.ಪಂ. ಆಡಳಿತ ವ್ಯವಸ್ಥೆ ದೌರ್ಬಲ್ಯವನ್ನು ಅರಿತ ಕೆಲವು ಇಲಾಖೆಯ ಅಧಿಕಾರಿಗಳು ಗ್ರಾಮಸಭೆಗೆ ಗೈರು ಹಾಜರಾಗಿದ್ದು ನೀರಾವರಿ ಹಾಗೂ ಕೃಷಿ ಅಧಿಕಾರಿಯನ್ನು ಸಭೆಗೆ ಕರೆತರಲು ಗ್ರಾಮಸ್ಥರು ಆಗ್ರಹಿಸಿದರು.
ಕುಡಿಯುವ ನೀರು, ಬೀದಿ ದೀಪ, ಚರಂಡಿಯ ನೀರಿನ ಅವ್ಯವಸ್ಥೆ, ಜನತೆಯ ಕೆಲಸ ಕಾರ್ಯಗಳಲ್ಲಿ ವಿಳಂಬ ಧೋರಣೆ, ಸ್ವಚ್ಛತೆಗೆ ಒತ್ತು ಕೊಡದ ಗ್ರಾ.ಪಂ. ಪಿಡಿಒ ಪ್ರಕಾಶ್ ಅವರನ್ನು ಬದಲಾವಣೆ ಮಾಡುವಂತೆ ಗ್ರಾ.ಪಂ. ಸದಸ್ಯರು ಸೇರಿದಂತೆ ಗ್ರಾಮಸ್ಥರು ಒಕ್ಕೊರಲಿನಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಭಾಗ್ಯಾ, ನೋಡಲ್ ಅಧಿಕಾರಿ ರಾಜಣ್ಣ, ಆರೋಗ್ಯ ಇಲಾಖೆ ಅಧಿಕಾರಿ ಮೀನಾಕ್ಷಿ, ಜಿ.ಎಸ್. ಮೋಹನ್ ಕುಮಾರ್ (ಶಿವು) ಎಂ.ಆರ್. ಸುಂದರ್, ಶಾಂತಾ ನಾಗರಾಜ್, ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು