ರಾಜಧಾನಿಯಲ್ಲಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಡಿಕೆಶಿ

dks
Published on

ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, ಶನಿವಾರ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಮೊದಲಿಗೆ ಸಂಚಾರ ದಟ್ಟಣೆ ನಿವಾರಣೆ ಉದ್ದೇಶದಿಂದ ಕೊರಮಂಗಲ 100 ಅಡಿ ಮುಖ್ಯ ರಸ್ತೆಯ ಈಜೀಪುರ ಸಿಗ್ನಲ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ನವರೆಗೆ ನಡೆಯುತ್ತಿರುವ ಮೇಲ್ಸೇತುವೆ (ಎಲಿವೇಟೆಡ್ ಕಾರಿಡಾರ್) ಕಾಮಗಾರಿ ಪರಿಶೀಲಿಸಿ ಕೂಡಲೇ ತ್ವರಿತವಾಗಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಾಕೀತು ಮಾಡಿದರು. 2017ರಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿತ್ತು. ಶೇ.29 ಕಾಮಗಾರಿ ನಡೆದ ಬಳಿಕ ಇದು ನಿಂತಿತ್ತು. ಕಾಮಗಾರಿ ನಿಲ್ಲಿಸಿದ್ದ ಪರಿಣಾಮ ಸಂಸ್ಥೆಗೆ ನೋಟಿಸ್ ನೀಡಿ ಟರ್ಮಿನೇಟ್ ಮಾಡಲಾಗಿದೆ. ಈಗ ಹೊಸದಾಗಿ ಟೆಂಡರ್ ಕರೆಯಲಾಗಿದೆ. ನಾಲ್ಕು ಪಥದ ಮೇಲ್ಸೇತುವೆ ಕಾಮಗಾರಿಗೆ ಅಂದಾಜು 300 ಕೋಟಿ ರೂ. ವ್ಯಯವಾಗಲಿದೆ ಎಂದರು.

ಮೇಲ್ಸೇತುವೆ ಕೇಂದ್ರಿಯ ಸದನ ಮತ್ತು ಸೋನಿ ವರ್ಲ್ಡ್ ಜಂಕ್ಷನ್‌ಗಳ ಮೂಲಕ ಹಾದು ಹೋಗಲಿದೆ. ಕೇಂದ್ರೀಯ ಸದನ ಜಂಕ್ಷನ್ ಮೂಲಕ ತಾವರೆಕರೆ, ಎಂ.ಜಿ.ರಸ್ತೆ, ಹೊಸೂರು ರಸ್ತೆ, ಅಗರ, ಬಿಟಿಎಂ ಲೇಔಟ್, ಕೋರಮಂಗಲ, ಬಿಡಿಎ ಕಾಂಪ್ಲೆಕ್ಸ್, ಸರ್ಜಾಪುರ ಮುಖ್ಯರಸ್ತೆ ಹಾಗೂ ವಿವೇಕನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ. ಮೇಲ್ಸೇತುವೆ ನಿರ್ಮಾಣದಿಂದಾಗಿ ಈ ಭಾಗದಲ್ಲಿ ಶೇ.40 ವಾಹನ ದಟ್ಟಣೆ ಕಡಿಮೆಯಾಗಲಿದೆ.30 ನಿಮಿಷ ಸಮಯ ಉಳಿತಾಯವಾಗಲಿದೆ ಎಂದು ಡಿಕೆಶಿ ಮಾಹಿತಿ ನೀಡಿದರು.

ಬನಶಂಕರಿ ಬಸ್ ನಿಲ್ದಾಣದ ಬಳಿ 6 ಕಡೆಯಿಂದ ವಾಹನಗಳ ಸಂಚಾರ ಇರುವುದರಿಂದ ಹೆಚ್ಚು ದಟ್ಟಣೆಯಾಗುತ್ತಿದೆ. ಇದರ ನಿವಾರಣೆಗೆ ಬಸ್ ನಿಲ್ದಾಣದ ಜಂಕ್ಷನ್ ಸುತ್ತ ಪಾದಚಾರಿ ಮೇಲ್ಸೇತುವೆ ಹಾಗೂ 2.5 ಕಿ.ಮೀ.ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು. ಬಳಿಕ, ಇಟ್ಟಮಡುವಿನಲ್ಲಿ ನಿರ್ಮಾಣವಾಗುತ್ತಿರುವ ರಾಜೀವ್ ಗಾಂಧಿ ಪ್ರತಿಮೆ ವಿನ್ಯಾಸ ವೀಕ್ಷಿಸಿದರು. ಅಲ್ಲಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ಗಾಂಧಿ ಬಜಾರ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಬಳಿಕ ವ್ಯಾಪಾರಿಗಳು ಹಾಗೂ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಸಾಕಷ್ಟು ಮಂದಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ರಸ್ತೆ ಅಗಲವನ್ನು ಕಡಿಮೆ ಮಾಡಲಾಗಿದೆ. ಅದನ್ನು ಮೊದಲಿನಂತೆಯೇ ವಿಸ್ತರಿಸಿ ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಡಿಕೆಶಿ,ಬೀದಿಬದಿ ವ್ಯಾಪಾರಿಗಳ ಅನುಕೂಲವಾಗುವ ದೃಷ್ಠಿಯಿಂದ ರಸ್ತೆಯನ್ನು ಅಗಲ ಮಾಡುವುದು ಸೇರಿ ಏನಾದರು ಬದಲಾವಣೆಗಳಿದ್ದರೆ ಅರ್ಜಿ ಸಲ್ಲಿಸಿ, ಇದರ ಬಗ್ಗೆ ಸ್ಥಳೀಯ ಹಾಲಿ ಹಾಗೂ ಮಾಜಿ ಶಾಸಕರ ಜತೆ ಚರ್ಚಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಉದಯ್ ಬಿ.ಗರುಡಾಚಾರ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾರ್, ಬಿಎಂಆರ್‌ಸಿಎಲ್ ಎಂಡಿ ಅಂಜುಂ ಫರ್ವೇಜ್, ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net