

ಹನೂರು: ತಾಲೂಕಿನ ಶ್ರೀ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಅಯೋಜಿಸಲಾಗಿತ್ತು.
ಹನೂರಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ವಿಜೃಂಭಣೆಯಿಂದ ಆಚರಿಸಿದ ಸ್ವಾತಂತ್ರೊೃೀತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಧ್ವಜಾರೋಹಣವನ್ನು ತಹಸೀಲ್ದಾರ್ ಎನ್.ಕೆ ಚೈತ್ರಾ ನೆರವೇರಿಸಿದರು. ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳು ಪಥಸಂಚಲನ ನಡೆಸುವುದರ ಮೂಲಕ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರೆ, ಕಾರ್ಯಕ್ರಮವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಯಾ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಡನೆ ಆಗಮಿಸಿ ಖುಷಿ ಪಟ್ಟರು. ನೃತ್ಯ ಪ್ರದರ್ಶನ ನೀಡಿದ ತಂಡಕ್ಕೆ ನೆನಪಿನ ಕಾಣಿಕೆ ವಿತರಿಸಲಾಯಿತು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಎಲ್ಲೇಮಾಳ ಸರ್ಕಾರಿ ಶಾಲೆಯ ಅಂಜಲಿ, ಮಾರಳ್ಳಿ ಶಾಲೆಯ ಸುಸೈನಾ ಅಪ್ಜಾ ಹಾಗೂ ಚನ್ನಾಲಿಂಗನಹಳ್ಳಿ ಶಾಲೆಯ ಪ್ರಿಯದರ್ಶಿನಿ ಇವರಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು. ಪೌರ ಕಾರ್ಮಿಕ ಮಹಿಳೆ ರಾಮಿ ಹಾಗೂ ಅಗ್ನಿಶಾಮಕ ಠಾಣೆಯ ಪೆರಿಯನಾಯಗಂ ಅವರನ್ನು ಸನ್ಮಾನಿಸಲಾಯಿತು.
ಯುವಕರು ದೇಶದ ಶಕ್ತಿ: ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಮಹಾನ್ ನಾಯಕರು ತ್ಯಾಗ ಹಾಗೂ ಹೋರಾಟದ ಫಲವಾಗಿ ದೇಶವು ಸ್ವಾತಂತ್ರ್ಯ ಪಡೆದುಕೊಳ್ಳಲು ಸಾಧ್ಯವಾಯಿತು. ಬಳಿಕ ವಿವಿಧ ಭಾಷೆ, ಸಂಸ್ಕೃತಿ ಹಾಗೂ ವೈವಿಧ್ಯತೆಯಲ್ಲಿ ಏಕತೆ ಕಾಣಲು ಸಾಧ್ಯವಾಯಿತು. ಆದ್ದರಿಂದ ಪ್ರತಿಯೊಬ್ಬರೂ ಮಹಾನ್ ನಾಯಕರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ರಸ್ತೆ ಅಭಿವೃದ್ಧಿಗೆ 222 ಕೋಟಿ ರೂ: ಭೌಗೋಳಿಕವಾಗಿ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿರುವ ಹನೂರು ಕ್ಷೇತ್ರದಲ್ಲಿ ಜನರ ಬೇಡಿಕೆಯಂತೆ ರಸ್ತೆ, ವಿದ್ಯುತ್, ನೀರಾವರಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕಿದೆ. ಈ ದೆಸೆಯಲ್ಲಿ ಅಗತ್ಯ ಕ್ರಮವಹಿಸಿದ್ದು, ಈಗಾಗಲೇ ಸರ್ಕಾರದಿಂದ ದೊರೆತಿರುವ 222 ಕೋಟಿ ರೂ. ಅನುದಾನದಲ್ಲ್ಲಿ ಹನೂರು ಮ.ಬೆಟ್ಟ, ರಾಮಾಪುರ, ಹನೂರು-ಬಂಡಳ್ಳಿ, ರಾಮಾಪುರ ಕೌದಳ್ಳಿ ಹಾಗೂ ಚಿಕ್ಕಲ್ಲೂರು ರಸ್ತೆ ಅಭಿವೃದ್ಧಿ ಚಾಲನೆ ನೀಡಲಾಗಿದ್ದು, ಇದು ಪ್ರಗತಿಯಲ್ಲಿದೆ. ಇನ್ನು ನದಿ ಮೂಲದಿಂದ ಗುಂಡಾಲ್ ಜಲಾಶಯಕ್ಕೆ ನೀರು ಬರುತ್ತಿದೆ. ಹಾಗೆಯೇ ರಾಮನಗುಡ್ಡೆ, ಹುಬ್ಬೆಹುಣಸೆ ನೀರು ತುಂಬಿಸಲು ಕ್ರಮ ವಹಿಸಲಾಗಿದೆ. ಜತೆಗೆ ಕ್ಷೇತ್ರದಲ್ಲೇ ಹರಿದು ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನದಿ ನೀರು ಬಳಕೆಗೆ ಯೋಜನೆಯನ್ನು ರೂಪಿಸಲಾಗಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಈ ಭಾಗಕ್ಕೆ ನೀರಾವರಿ ಸೌಕರ್ಯವನ್ನು ಒದಗಿಸುವಂತೆ ಶಾಸಕರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಬಿಇಒ ಗುರುಲಿಂಗಯ್ಯ, ತಾಪಂ ಇಒ ಉಮೇಶ್, ಟಿಎಚ್‌ಒ ಡಾ.ಪ್ರಕಾಶ್, ಸೆಸ್ಕ್ ಎಇಇ ರಂಗಸ್ವಾಮಿ, ಇನ್ಸ್‌ಪೆಕ್ಟರ್ ಆನಂದಮೂರ್ತಿ, ಪಪಂ ಅಧ್ಯಕ್ಷೆ ಮುಮ್ತಾಜ್‌ಬಾನು, ಉಪಾಧ್ಯಕ್ಷ ಆನಂದ್, ಸದಸ್ಯರಾದ ರೂಪಾ, ಮಂಜುಳಾ, ಲತಾಮಣಿ, ಸಂಪತ್‌ಕುಮಾರ್, ಸೋಮಶೇಖರ್, ಮಹೇಶ್, ಸಂಪತ್‌ಕುಮಾರ್, ಮಹೇಶ್‌ನಾಯ್ಕ, ಮಹಾದೇಶ್ ಹಾಗೂ ಇನ್ನಿತರರು ಇದ್ದರು.