

ಚನ್ನಗಿರಿ: ಕ್ಷೇತ್ರದ ಮತದಾರರು ನನ್ನ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು.
ತಾಲೂಕಿನ ಹೊನ್ನೇಬಾಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆಯಲ್ಲಿ ಸೋಮವಾರ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರ ಅನುದಾನ ನೀಡುತ್ತೋ, ಬಿಡುತ್ತೋ ಗೊತ್ತಿಲ್ಲ. ಜನರಿಗೆ ಅತ್ಯವಶ್ಯಕವಾಗಿ ಕೆಲಸಗಳು ಬೇಕಾದಲ್ಲಿ ನನ್ನ ಸ್ವಂತ ಹಣದಲ್ಲಿ ಅಭಿವೃದ್ಧಿ ಕಾರ್ಯ ಮಾಡಿಕೊಡುತ್ತೇನೆ. ನಂತರ ಸರ್ಕಾರದ ಅನುದಾನ ನೋಡಿದರೆ ಆಯಿತು. ಮೊದಲು ಕೆಲಸವಾಗಬೇಕು, ಜನರ ಸಮಸ್ಯೆ ಬಗೆಹರಿಯಬೇಕು ಎಂದರು.
ಮಕ್ಕಳಿಗೆ ಶಿಕ್ಷಣ ಸಿಗಬೇಕು ಅನ್ನುವುದು ಸರ್ಕಾರದ ಆಶಯ. ಶಾಸಕನಾದ ಮೊದಲ ದಿನದಿಂದ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದೇನೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಶಾಲೆಯಲ್ಲಿ ಸಮಸ್ಯೆ ಕಂಡುಬಂದಲ್ಲಿ ನೇರವಾಗಿ ದೂರವಾಣಿ ಕರೆ ಮಾಡಬಹುದು. ಅದಕ್ಕೆ ಬೇಕಾದ ಪರಿಹಾರವನ್ನು ಎಲ್ಲರೂ ಸೇರಿ ಕಂಡುಕೊಳ್ಳೋಣ ಎಂದರು.
ಶಿಕ್ಷಣ ಇಲಾಖೆಯ ವಿವೇಕ ಯೋಜನೆಯಡಿ ತಾಲೂಕಿನ ಹೊನ್ನೇಬಾಗಿ ಗ್ರಾಮದ ಶಾಲಾ ಕೊಠಡಿಗೆ 13.90 ಲಕ್ಷ ರೂ., ತಿಳಿನೀರು ಕಟ್ಟೆ ಗ್ರಾಮದ ಶಾಲೆಗೆ 27.80 ಲಕ್ಷ ರೂ., ಶಿವಗಂಗೆ ಹಾಲು ಗ್ರಾಮದ ಶಾಲೆಗೆ 13.90 ಲಕ್ಷ ರೂ., ಚನ್ನಗಿರಿ ಸರ್ಕಾರಿ ಉರ್ದು ಶಾಲೆಗೆ 13.90 ಲಕ್ಷ ರೂ. ನೀಡಲಾಗಿದೆ ಎಂದರು.
ಶಾಲೆಯಲ್ಲಿ ಶೌಚಾಲಯ ಇದ್ದರೂ ನೀರಿನ ವ್ಯವಸ್ಥೆ ಇಲ್ಲದಿರುವ ಬಗ್ಗೆ ಎಸ್‌ಡಿಎಂಸಿ ಸದಸ್ಯರು ಗಮನಕ್ಕೆ ತರುತ್ತಿದ್ದಂತೆ ಯಾವುದೇ ಅನುದಾನ ಇರದೆ ಇದ್ದರೂ ನಾನು ಹಣ ನೀಡುತ್ತೇನೆ. ಇಲ್ಲಿ ಮೊದಲು ಕೊಳವೆಬಾವಿ ಕೊರೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಿಇಒ ಜಯಪ್ಪ, ಬಿಆರ್‌ಸಿ ಡಾ.ಎಸ್.ಶಂಕರಪ್ಪ, ಜಿಪಂ ಎಇಇ ಷಣ್ಮುಖಪ್ಪ, ಗ್ರಾಪಂ ಸದಸ್ಯ ಜಬೀವುಲ್ಲಾ, ನಿಜಲಿಂಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ತನ್ವೀರ್‌ಖಾನ್, ಅಮ್ಜದ್‌ಖಾನ್ ಇದ್ದರು.