ವಿದ್ಯಾರ್ಥಿಗಳಿಂದ ಗಿರಣಿಯಂತ್ರ ಅಭಿವೃದ್ಧಿ, ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ, ಸಣ್ಣ ರೈತರಿಗೆ ವರದಾನ

akki girani
ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿದ ಯಂತ್ರ
Published on

ಹರಿಪ್ರಸಾದ್ ನಂದಳಿಕೆ ಶಿರ್ವ

ಸಣ್ಣ ಪ್ರಮಾಣದಲ್ಲಿ ಭತ್ತ ಬೆಳೆಯುವ ರೈತರು ತಾವು ಬೆಳೆದ ಭತ್ತವನ್ನು ಗಿರಣಿಗಳಿಗೆ ಕೊಟ್ಟು ಸಂಸ್ಕರಿಸುತ್ತಾರೆ. ಕೈಗೆಟಕುವ ದರದಲ್ಲಿ ಅಗತ್ಯ ಯಂತ್ರೋಪಕರಣ ಲಭ್ಯವಿಲ್ಲದ ಕಾರಣ ರೈತರು ಭತ್ತವನ್ನು ತಾವೇ ಸಂಸ್ಕರಿಸುವುದಿಲ್ಲ. ರೈತರೇ ಭತ್ತವನ್ನು ಅಕ್ಕಿಯಾಗಿಸಿ ಮಾರಾಟ ಮಾಡಿದಲ್ಲಿ ಆದಾಯ ಹೆಚ್ಚುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳೇ ವಿನೂತನ ಮಾದರಿ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ರೈತರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಯಂತ್ರವೊಂದನ್ನು ತಯಾರಿಸಿದ್ದಾರೆ.

ಯಂತ್ರದ ಪ್ರಯೋಜನ

ಮೊದಲು ಈ ಯಂತ್ರ ಭತ್ತದಿಂದ ಕಲ್ಲು ಮತ್ತು ಕಸಕಡ್ಡಿ ನಂತರ ಸಿಪ್ಪೆ ಬೇರ್ಪಡಿಸುತ್ತದೆ. ಅಂತಿಮವಾಗಿ ಭತ್ತದ ಹೊಟ್ಟನ್ನು ಬೇರ್ಪಡಿಸುತ್ತದೆ. ಅಗತ್ಯವಿದ್ದರೆ ಇದೇ ಯಂತ್ರದ ಸಹಾಯದಿಂದ ಅಕ್ಕಿಯನ್ನು ಪಾಲಿಶ್ ಮಾಡಬಹುದು. ಕಡಿಮೆ ಪ್ರಮಾಣದ ಭತ್ತ ಬೆಳೆಯುವ ರೈತರಿಗೆ ಇದು ವರದಾನವಾಗಿದೆ. ಕೆಲವೇ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುವ ರೈತರು ಅಕ್ಕಿಗಾಗಿ ಗಿರಾಣಿಗೆ ಅಲೆದಾಡುವ ಬದಲು ಮನೆಯಲ್ಲೇ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯಲು ಈ ಯಂತ್ರ ನೆರವಾಗಲಿದೆ.

ವಿದ್ಯಾರ್ಥಿಗಳಾದ ಅಂಶುಮಾನ್, ಕೆ.ಎನ್.ಶ್ರೀಶ ಆಚಾರ್, ರೋಹನ್ ಯು.ಪಾಲನ್ ಮತ್ತು ವಿಕ್ರಮ್ ಅವರು ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕ ಅನಂತ್ ಮೋಹನ್ ಮಲ್ಯ ಮಾರ್ಗದರ್ಶನದಲ್ಲಿ ಡೊಮೆಸ್ಟಿಕ್ ರೈಸ್ ಮಿಲ್ ವಿತ್ ಡಿಸ್ಪಾನ್ಸರ್(ವಿನೂತನ ಮಾದರಿಯ ಅಕ್ಕಿ ಗಿರಣಿ)ಯನ್ನು ಅಭಿವೃದ್ಧಿಪಡಿಸಿದ್ದಾರೆ. ವಿದ್ಯಾರ್ಥಿಗಳ ಈ ನೂತನ ಆವಿಷ್ಕಾರಕ್ಕೆ ಸಂಸ್ಥೆಯ ಆಡಳಿತ ಮಂಡಳಿ, ಮೆಕಾನಿಕಲ್ ವಿಭಾಗ ಮುಖ್ಯಸ್ಥ ಡಾ.ರಾಜ ಯತೀಶ್ ಯಾದವ್ ಅಭಿನಂದಿಸಿದ್ದಾರೆ.

ರೈತರೇ ಭತ್ತವನ್ನು ಅಕ್ಕಿಯಾಗಿ ಸಂಸ್ಕರಿಸಿ ಮಾರಾಟ ಮಾಡಿದಲ್ಲಿ ರೈತರ ಆದಾಯ ಹೆಚ್ಚುತ್ತದೆ. ಈ ಯಂತ್ರ ಸಣ್ಣ ಪ್ರಮಾಣದಲ್ಲಿ ಭತ್ತ ಬೆಳೆಯುವ ರೈತರಿಗೆ ವರದಾನವಾಗಲಿದೆ. ವಿದ್ಯಾರ್ಥಿಗಳೇ ವಿನೂತನ ಮಾದರಿ ಯಂತ್ರವೊಂದನ್ನು ಅಭಿವೃದ್ಧಿಪಡಿಸಿರುವುದು ಹೆಮ್ಮೆಯ ಸಂಗತಿ.-ಡಾ.ತಿರುಮಲೇಶ್ವರ ಭಟ್, ಪ್ರಾಂಶುಪಾಲರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net