ಹಂತ ಹಂತವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿ

19KMD-2
ಸುಣ್ಣದದೊಡ್ಡಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 29 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಕದಲೂರು ಉದಯ್ ಭೂಮಿ ಪೂಜೆ ನೆರವೇರಿಸಿದರು.
Published on

ಕೆ.ಎಂ.ದೊಡ್ಡಿ: ನಾನು ಶಾಸಕನಾದ ಬಳಿಕ ಈಗ ಹಂತ ಹಂತವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದೆನೆ ಎಂದು ಶಾಸಕ ಕದಲೂರು ಉದಯ್ ಸ್ಪಷ್ಟಪಡಿಸಿದರು.

ಸಮೀಪದ ಸುಣ್ಣದದೊಡ್ಡಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 29 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಅದರಲ್ಲಿ ಕೆಲ ಶಾಲೆಗಳಲ್ಲಿ ಕೊಠಡಿಗಳ ಕೊರತೆಯಿದ್ದು, ಸುಣ್ಣದದೊಡ್ಡಿ ಬಿದರಹೊಸಹಳ್ಳಿ, ನವಿಲೆ, ನಿಡಘಟ್ಡ ಗ್ರಾಮಗಳಿಗೆ ತಲಾ ಎರಡು ಮೂರು ಕೊಠಡಿಗಳನ್ನು ಸರ್ಕಾರದಿಂದ ಅನುದಾನ ತಂದು ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದರು.

ನಾನು ಶಾಸಕನಾಗುವುದಕ್ಕಿಂತ ಮೊದಲು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಲವು ಸರ್ಕಾರಿ ಶಾಲೆಗಳಿಗೆ ಉಚಿತ ನೋಟ್ ಪಠ್ಯ ಪರಿಕರಗಳನ್ನು ವಿತರಿಸಿದ್ದು, ಆ ಸಂದರ್ಭದಲ್ಲಿ ಹಲವು ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿರುವುದನ್ನು ಗಮನಿಸಿದ್ದು ಬಳಿಕ ಗ್ರಾಮಗಳಿಗೆ ಭೇಟಿ ವೇಳೆಯೂ ಗ್ರಾಮಸ್ಥರು ನನಗೆ ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂದಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ್, ಶಿಕ್ಷಣ ಸಂಯೋಜಕ ಲೋಕೇಶ್, ಸಿಆರ್‌ಪಿ ನಂದೀಶ್, ತಾಲೂಕು ಕೆಡಿಪಿ ಸದಸ್ಯ ಅಭಿಷೇಕ್, ಮುಖಂಡರಾದ ಪೇಂಟ್ ಮಹೇಶ್, ಎಸ್.ಬಿ.ಯೋಗೇಶ್, ಬಸವಲಿಂಗೇಗೌಡ, ಜಯಲಿಂಗ, ಎಸ್.ಲಿಂಗಯ್ಯ, ರಾಮಲಿಂಗಯ್ಯ, ರಾಜಣ್ಣ ಮತ್ತಿತರಿದ್ದರು.

ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯವಿಲ್ಲ: ಜಾತಿ ಜನಗಣತಿ ಬಗ್ಗೆ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಿ ಎಂಬುದು ನಮ್ಮೆಲ್ಲರ ಒಕ್ಕೊರಲಿನ ಅಭಿಪ್ರಾಯವಾಗಿದೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷದಲ್ಲಿ ಜಾತಿಗಣತಿ ಮಾಡಿದ್ದು, ಈಗ ಮತ್ತೆ ಪರಿಶೀಲನೆ ಮಾಡಬೇಕೆಂಬುದಷ್ಟೆ ನಮ್ಮ ಅಭಿಪ್ರಾಯವಾಗಿದೆ. ಈ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಯುತ್ತಿದ್ದು ವರದಿ ಬಂದ ಬಳಿಕ ಸರ್ಕಾರ ಉತ್ತಮ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಜಾತಿ ಜನಗಣತಿ ವಿಚಾರದಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಏನೂ ಇಲ್ಲ. ನಮ್ಮ ಪಕ್ಷದ ಹಿರಿಯ ಮುಖಂಡರು ಸೇರಿದಂತೆ ಸರ್ಕಾರ ಉತ್ತಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದ್ದು ಅದಕ್ಕೆ ನಾವು ಬದ್ಧರಾಗುತ್ತೇವೆ ಎಂದು ಸ್ಪಷ್ಟಪಡಿಸಿದರು.

ನಾವು ಬಿಜೆಪಿ ವಿರುದ್ಧ ಪ್ರತಿಭಟಿಸುತ್ತಿಲ್ಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಕಾಂಗ್ರೆಸ್ ಕೆಲ ಶಾಸಕರ ವಿರುದ್ಧ ಸುಖಾಸುಮ್ಮನೆ ಇಡಿ, ಸಿಬಿಐ ಬಳಸಿಕೊಂಡು ಅಪಪ್ರಚಾರ ಮಾಡುತ್ತ ಹೆದರಿಸುತ್ತಿದ್ದಾರೆ. ಅದರ ವಿರುದ್ಧ ಪ್ರತಿಭಟಿಸುತ್ತಿರುವುದಾಗಿ ತಿಳಿಸಿದರು.

ಯಾವುದೇ ಸರ್ಕಾರ ಬಂದರೂ ಒಂದು ಜಾತಿ ಪರವಾಗಿ ನಿಲ್ಲಲ್ಲ. ಎಲ್ಲ ಸಮಾಜದವರು ಒಂದೇ. ಹಿಂದುಳಿದ ವರ್ಗದವರಿಗೆ ಸವಲತ್ತು ಕೊಡುವುದು ತಪ್ಪೇನಿಲ್ಲ? ಬಿಜೆಪಿ ಪಕ್ಷದವರು ಸಹ ಮುಸ್ಲಿಂ ಒಲೈಕೆಗೆ ಹಲವು ಕಸರತ್ತು ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಕೇಂದ್ರದವರೂ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಿದರೆ ನಮ್ಮ ಸರ್ಕಾರ ಬೆಲೆ ಏರಿಕೆ ಮಾಡುವುದಿಲ್ಲ. ನಮ್ಮ ಸರ್ಕಾರ ಕೇಂದ್ರಕ್ಕೆ ಕಟ್ಟುತ್ತಿರುವ ಜಿಎಸ್ಟಿ ಹಣ ವಾಪಸ್ ಕೊಟ್ಟರೇ ಸಾಕು ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವನ್ನು ಕಡೆಗಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಮತ್ತು ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಹೆಚ್ಚಿನ ಸವಲತ್ತು ನೀಡಿ ನಮಗೆ ಅಲ್ಪ ಸ್ವಲ್ಪ ಸವಲತ್ತು ನೀಡಿ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಸರ್ಕಾರದ ಕ್ರಮ ಎಷ್ಟು ಸರಿ. ಈ ಬಗ್ಗೆ ಬಿಜೆಪಿ ಪಕ್ಷದವರು ಆತ್ಮಾವಲೋಕನ ಮಾಡಿ ಕೊಳ್ಳಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net