

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ ಪುತ್ತೂರು-ಬೆಳ್ಳಾರೆ ರಸ್ತೆಯ ಕೆಯ್ಯೂರಿನಿಂದ ಕಣಿಯಾರು ಮೂಲಕವಾಗಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕದ ಕಣಿಯಾರು-ಕೌಡಿಚ್ಚಾರು ರಸ್ತೆಗೆ ಇಳಂತಾಜೆ-ಅಜ್ಜಿಕಲ್ಲು ಎಂಬಲ್ಲಿ ಸಂಪರ್ಕ ಕಲ್ಪಿಸುವ ಶೇಖಮಲೆ-ದೇರ್ಲ-ಇಳಂತಾಜೆ ರಸ್ತೆ ಹದಗೆಟ್ಟಿರುವ ಭಾಗಕ್ಕೆ ಅಭಿವೃದ್ಧಿಯ ಭಾಗ್ಯ ಕೂಡಿ ಬಂದಿದೆ. ಶೇಖಮಲೆಯಿಂದ ದೇರ್ಲ ಪರಿಶಿಷ್ಟ ಜಾತಿ ಕಾಲೋನಿ ತನಕದ ಕೆಯ್ಯೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ರಸ್ತೆ ಭಾಗದ ಅಭಿವೃದ್ಧಿ ಕಾರ್ಯಕ್ಕೆ ಮುಂದಿನ ವಾರದಲ್ಲಿ ಚಾಲನೆ ಸಿಗಲಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಖಮಲೆಯಿಂದ ದೇರ್ಲ ಮೂಲಕವಾಗಿ ಇಳಂತಾಜೆಗೆ ಹೋಗುವ ರಸ್ತೆ ಕೆಯ್ಯೂರು ಗ್ರಾಪಂ ವ್ಯಾಪ್ತಿಯ ದೇರ್ಲ ಭಾಗದಲ್ಲಿ ಸಂಪೂರ್ಣವಾಗಿ ಹದಗೆಟ್ಟಿತ್ತು. ದೇರ್ಲ ಪರಿಶಿಷ್ಟ ಕಾಲೋನಿ ವ್ಯಾಪ್ತಿಯ ಅರ್ಧ ಕಿಮೀ ವ್ಯಾಪ್ತಿಯ ರಸ್ತೆಯಲ್ಲಿ ಬೃಹತ್ ಹೊಂಡ-ಗುಂಡಿ ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೀರಾ ಸಮಸ್ಯೆಯಾಗಿತ್ತು. ಮಳೆಗಾಲದಲ್ಲಂತೂ ಈ ಭಾಗದ ಜನತೆ ಸಮಸ್ಯೆ ಅನುಭವಿಸಿದ್ದರು. ರಸ್ತೆ ಹದಗೆಟ್ಟಿರುವ ಪರಿಣಾಮವಾಗಿ ಅಲ್ಲಿನ ಜನತೆ ಅನುಭವಸುತ್ತಿದ್ದ ಸಂಕಷ್ಟದ ಕುರಿತು ವಿಜಯವಾಣಿ ಪತ್ರಿಕೆ ವರದಿ ಪ್ರಕಟಿಸಿ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ಶಾಸಕ ಅಶೋಕ್‌ಕುಮಾರ್ ರೈ ಪ್ರಯತ್ನದ ಲವಾಗಿ ಈ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಮಂಜೂರಾಗಿದೆ. ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮೂಲಕ ಕಾಮಗಾರಿ ಅನುಷ್ಟಾನಗೊಳ್ಳಲಿದೆ. ಈ ರಸ್ತೆಗೆ ಕಾಂಕ್ರೀಟ್ ಅಳವಡಿಸಲು ವರಾಹಿ ನೀರಾವರಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮುಂದಿನ ವಾರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನಡೆಯಲಿದೆ. ಇದರಿಂದಾಗಿ ಇಲ್ಲಿನ ಜನತೆಯ ಬಹುವರ್ಷದ ಬೇಡಿಕೆ ಈಡೇರಲಿದೆ. ಗ್ರಾಮಸ್ಥರಿಗೆ ಸಂತಸ ಬಹಳಷ್ಟು ವರ್ಷಗಳಿಂದ ಶೇಖಮಲೆ-ದೇರ್ಲ-ಇಳಂತಾಜೆ ರಸ್ತೆಯ ದೇರ್ಲ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ರಸ್ತೆ ಹದಗೆಟ್ಟ ಪರಿಣಾಮವಾಗಿ ಈ ಭಾಗದ ಗ್ರಾಮಸ್ಥರಾದ ನಾವು ಕಷ್ಟ ಅನುಭವಿಸಿಕೊಂಡು ಬಂದಿದ್ದೇವೆ. ದೇರ್ಲ ಪರಿಶಿಷ್ಟ ಜಾತಿ ಕಾಲೋನಿ ವ್ಯಾಪ್ತಿಯಲ್ಲಿ ವಾಹನ ಸಂಚಾರ, ಜನಸಂಚಾರಕ್ಕೆ ಸಮಸ್ಯೆಯಾಗಿತ್ತು. ಹದಗೆಟ್ಟಿರುವ ರಸ್ತೆ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಸದ್ಯ ರಸ್ತೆ ಅಭಿವೃದ್ಧಿಗೆ ಅನುದಾನ ಬಂದಿರುವುದು ಖುಷಿ ತಂದಿದೆ. ಮುಂದೆ ಸಂಚಾರ ಸಮಸ್ಯೆ ದೂರವಾಗಲಿದೆ ಎಂದು ಅಲ್ಲಿನ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಶಾಸಕರಿಗೆ ಮನವಿ ಮಾಡಿಕೊಂಡಿದ್ದೆವು. ಜನತೆಯ ಸಮಸ್ಯೆಗೆ ಸ್ಪಂದಿಸಿರುವ ಶಾಸಕ ಅಶೋಕ್‌ಕುಮಾರ್ ರೈ ಪ್ರಯತ್ನದ ಲವಾಗಿ 2 ಕೋಟಿ ರೂ. ಅನುದಾನ ಬಂದಿದೆ. ಮುಂದಿನ ವಾರದಲ್ಲಿ ಕಾಮಗಾರಿಗೆ ಶಾಸಕರು ಶಿಲಾನ್ಯಾಸ ಮಾಡಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಬಹಳಷ್ಟು ವರ್ಷಗಳಿಂದ ಇಲ್ಲಿನ ಜನತೆ ಅನುಭವಿಸುತ್ತಿದ್ದ ಸಂಚಾರ ಸಮಸ್ಯೆಗೆ ಮುಕ್ತಿ ಸಿಗಲಿದೆ. ಬಟ್ಯಪ್ಪ ರೈ ದೇರ್ಲ, ಕೆಯ್ಯೂರು ಗ್ರಾಪಂ ಸದಸ್ಯ.