

ಹುಣಸೂರು: ಏಳು ದಶಕಗಳ ನಂತರ ಇದೇ ಮೊದಲ ಬಾರಿಗೆ ಕೇಂದ್ರೀಯ ತಳಿಗಳ ಬಿಡುಗಡೆ ಸಮಿತಿ (ಸೆಂಟ್ರಲ್ ವೆರೈಟಿ ರಿಲೀಸ್ ಕಮಿಟಿ) ವತಿಯಿಂದ ತಂಬಾಕಿನ ನೂತನವಾಗಿ ಆವಿಷ್ಕಾರಗೊಂಡ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ತಂಬಾಕು ಕೃಷಿಗೆ ಸರ್ಕಾರಗಳ ಅಧಿಕೃತ ಮನ್ನಣೆ ದೊರೆತಂದಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್(ಐಸಿಎಆರ್)ನ ಡೆಪ್ಯೂಟಿ ಡೈರಕ್ಟರ್ ಜನರಲ್ ಡಾ.ಟಿ.ಆರ್.ಶರ್ಮಾ ತಿಳಿಸಿದರು.
ನಗರದ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ಆವರಣದಲ್ಲಿ ಗುರುವಾರ ಐಸಿಎಆರ್-ಸಿಟಿಆರ್‌ಐ ಸಹಯೋಗದಲ್ಲಿ ಆಯೋಜಿಸಿದ್ದ 13ನೇ ವಾರ್ಷಿಕ ಆಲ್ ಇಂಡಿಯಾ ನೆಟ್‌ವರ್ಕ್ ಪ್ರಾಜೆಕ್ಟ್ ಆನ್ ಟೊಬ್ಯಾಕೋ ಕುರಿತ ರಾಷ್ಟ್ರ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದಶಕಗಳ ಕಾಲ ತಂಬಾಕು ಕುರಿತಂತೆ ಆರೋಗ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯದ ಕಾರಣದಿಂದಾಗಿ ನಕಾರಾತ್ಮಕ ಸಂದೇಶಗಳಿಂದಲೆ ತಂಬಾಕು ಕೃಷಿ ಕುಂಟುತ್ತಾ, ಎಡವುತ್ತಲೇ ಸಾಗಿ ಬಂದಿದೆ. ಆದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ತಂಬಾಕು ಕೃಷಿ ಪ್ರಮುಖವಾಗಿದ್ದು, ತಂಬಾಕು ಕೃಷಿಯಿಂದ ಸರ್ಕಾರಕ್ಕೆ 45 ಸಾವಿರ ಕೋಟಿ ರೂ.ಆದಾಯವಿದೆ. ಮಾತ್ರವಲ್ಲದೆ ತಂಬಾಕು ಕೃಷಿಯನ್ನು ದೇಶಾದ್ಯಂತ 45.7 ಮಿಲಿಯನ್ ರೈತ ಕುಟುಂಬಗಳು ಅವಲಂಬಿಸಿವೆ. ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದಾಗಿ ಹೆಕ್ಟೇರ್‌ನಲ್ಲಿ ತಂಬಾಕು ಇಳುವರಿಯೂ ಕೂಡ ಗಮನಾರ್ಹವಾಗಿ ಏರಿಕೆಯಾಗಿದೆ. ಇವೆಲ್ಲಕ್ಕೂ ಐಸಿಎಆರ್-ಸಿಟಿಆರ್‌ಐ ವಿಜ್ಞಾನಿಗಳು, ಸಿಬ್ಬಂದಿಯ ಪರಿಶ್ರಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಆವಿಷ್ಕಾರದ ಅಗತ್ಯತೆ: ಸಿಟಿಆರ್‌ಐ ಈವರೆಗೆ ನೂರಕ್ಕೂ ಹೆಚ್ಚು ನೂತನ ತಂಬಾಕು ತಳಿಗಳನ್ನು ಆವಿಷ್ಕರಿಸಿದೆ. ವಿಶ್ವದಾದ್ಯಂತ ಹಾಲಿ ಇರುವ 70ಕ್ಕೂ ಹೆಚ್ಚು ವಿವಿಧ ಜಾತಿಯ ತಂಬಾಕುಗಳ ಪೈಕಿ 40ಕ್ಕೂ ಹೆಚ್ಚು ಜಾತಿಯ ತಂಬಾಕು ಬೆಳೆಗಳನ್ನು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಕಾಪಿಡಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ ತಳಿಗಳ ಬಿಡುಗಡೆ ಸಮಿತಿ ಮೂಲಕ ತಂಬಾಕು ಬೆಳೆಯನ್ನು ಮಾನ್ಯ ಮಾಡುವ ಮೂಲಕ ನಮ್ಮ ಕಾರ್ಯಕ್ಕೆ ಬೆಂಬಲ ಸಿಕ್ಕಂತಾಗಿದೆ. ತಂಬಾಕು ಪರಿಧಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ವಿಜ್ಞಾನಿಗಳು ಅಗತ್ಯವಾಗಿ ಹಲವು ಉಪಕ್ರಮಗಳಿಗೆ ಮುಂದಾಗಬೇಕಿದೆ ಎಂದು ಡಾ.ಟಿ.ಆರ್.ಶರ್ಮಾ ತಿಳಿಸಿದರು.
ತಂಬಾಕಿನ ವಿವಿಧ ಕುಲಗಳನ್ನು(ಜೀನ್ಸ್) ಆವಿಷ್ಕರಿಸುವುದು ಅಗತ್ಯವಾಗಿದೆ. ಮುಖ್ಯವಾಗಿ ಹೆಚ್ಚು ಇಳುವರಿ ನೀಡುವಂತಹ ತಳಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯವಾಗಬೇಕಿದೆ. ಅಲ್ಲದೆ ಪ್ರೀ ಬ್ರೀಡಿಂಗ್(ಪೂರ್ವ ಸಂತಾನೋತ್ಪತ್ತಿ)ತಂತ್ರಜ್ಞಾನದ ಸಮರ್ಪಕ ಬಳಕೆಯಾಗಬೇಕಿದೆ. ಅತಿವೃಷ್ಟಿ ಮತ್ತು ಬರಗಾಲದ ಪರಿಸ್ಥಿತಿಯಲ್ಲೂ ಬೆಳೆ ಉಳಿಸಿಕೊಳ್ಳುವಂತಹ ತಳಿಗಳ ಅಭಿವೃದ್ಧಿ, ರೋಗ ರುಜಿನಗಳ ನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯ ಆಗಬೇಕಿದೆ. ತಂಬಾಕು ಕೃಷಿಯ ಅವಧಿ ಹಾಲಿಯಿರುವ 6 ತಿಂಗಳ ಅವಧಿಗಿಂತಲೂ ಕಡಿಮೆಯಾಗಬೇಕಿದೆ. ಕಾರ್ಮಿಕರ ಕೊರತೆ ನೀಗಲು ನೂತನ ತಂತ್ರಜ್ಞಾನಗಳ ಬಳಕೆಯಿಂದ ಮಾತ್ರ ಸಾಧ್ಯವಾಗಿದ್ದು, ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆವಿಷ್ಕಾರಗಳು ನಡೆಯಬೇಕಿದೆ ಎಂದರು.
ವಿಜ್ಞಾನಿಗಳ ಸತತ ಪ್ರಯತ್ನ
ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ತೋಟಗಾರಿಕೆ ಮತ್ತು ಕೃಷಿ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್ ಮಾತನಾಡಿ, ತಂಬಾಕು ಕೃಷಿಗೆ ಅನುಕೂಲಕರ ಭೂಮಿಯನ್ನು ಈ ಭಾಗ ಹೊಂದಿದ್ದು, ಗುಣಮಟ್ಟದ ಇಳುವರಿ ಪಡೆಯಲು ವಿಜ್ಞಾನಿಗಳ ಪ್ರಯತ್ನ ಸತತವಾಗಿದೆ ಎಂದರು.
ನಿಷೇಧ ಸರ್ಕಾರದ ಮುಂದಿಲ್ಲ: ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಸಿಟಿಆರ್‌ಐ ವಿಜ್ಞಾನಿಗಳು ರೈತರ ಆರ್ಥಿಕ ಸದೃಢತೆಗಾಗಿ ನೂತನ ಆವಿಷ್ಕಾರಗಳೊಂದಿಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತಿದ್ದಾರೆ. ಆದರೆ, ಅವರ ಆವಿಷ್ಕಾರಗಳನ್ನು ರೈತರಿಗೆ ತಲುಪಿಸುವ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕಿದೆ. ಈ ನಡುವೆ 2020ರ ನಂತರ ತಂಬಾಕು ಬೆಳೆ ನಿಷೇಧವೆಂಬ ಕೂಗು ಇಂದಿಗೂ ರೈತರಲ್ಲಿ ಮುಂದುವರಿದಿದ್ದು ಈ ಗೊಂದಲಗಳಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾತನಾಡಿ ರೈತರಿಗೆ ಮಾಹಿತಿ ನೀಡಬೇಕು ಎಂದರು.
ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಈ ಕುರಿತು ಒಡಂಬಡಿಕೆಯಾಗಿದೆ ಎನ್ನುವ ಮಾತುಗಳು ಇಂದಿಗೂ ಇದೆ. ರೈತರನ್ನು ಗೊಂದಲದ ಮನಸ್ಥಿತಿಗೆ ತಂದಿದೆ ಎಂದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಸಿಟಿಆರ್‌ಐ ನಿರ್ದೇಶಕ ಡಾ.ಶೇಷು ಮಾಧವ್ ಮಾತನಾಡಿ, ತಂಬಾಕು ಬೆಳೆ ನಿಷೇಧ ಸರ್ಕಾರದ ಮುಂದಿಲ್ಲ. ಬದಲಾಗಿ ಬೆಳೆ ಪ್ರಮಾಣ ನಿಯಂತ್ರಣ ಕುರಿತು ಸಾಕಷ್ಟು ನಿರ್ಧಾರಗಳನ್ನು ಕೈಗೊಂಡಿದೆ ಎಂದರು.