

ನಿರ್ವಹಣೆ, ಸ್ವಚ್ಛತೆ ಇಲ್ಲದೆ ಸೊರಗಿದ್ದ ವಾಣಿಜ್ಯ ಸಂಕೀರ್ಣ
1.80 ಕೋಟಿ ರೂ. ವೆಚ್ಚದಲ್ಲಿ ನವೀಕರಣ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ನಗರದ ಮುಖ್ಯರಸ್ತೆ, ಅರ್ಕಾವತಿ ನದಿ ದಡದಲ್ಲಿರುವ ನಗರಸಭೆಯ ಡಾ. ರಾಜ್‌ಕುಮಾರ್ ಕಾಂಪ್ಲೆಕ್ಸ್‌ಗೆ ಬಹಳ ದಿನಗಳ ನಂತರ ಶುಕ್ರದೆಸೆ ಕೂಡಿಬಂದಿದ್ದು 1.80 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನವೀಕರಣಕ್ಕೆ ನಗರಸಭೆ ಮುಂದಡಿ ಇಟ್ಟಿದೆ.
ಮೂವತ್ತು 30 ವರ್ಷಗಳ ಹಿಂದೆ ಪುರಸಭೆ ಆಡಳಿತವಿದ್ದಾಗ ನಗರದ ವ್ಯಾಪಾರಸ್ಥರಿಗೆ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅರ್ಕಾವತಿ ನದಿ ಪಕ್ಕದ ಖಾಲಿ ಜಾಗದಲ್ಲಿ ಬೃಹತ್ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕೆಲವಷ್ಟು ವರ್ಷ ಈ ಕಟ್ಟಡ ಬ್ಯಾಂಕ್, ಬೆಸ್ಕಾಂ, ರಾಮನಗರ ತಾಲೂಕು ಪಂಚಾಯಿತಿ ಕಚೇರಿ, ರಾಮನಗರ ಪ್ರಾಧಿಕಾರ ಕಚೇರಿ, ವಾಣಿಜ್ಯ ಇಲಾಖೆ, ಜಲಮಂಡಳಿ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದುದರಿಂದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡಿತು. ನಂತರದ ದಿನಗಳಲ್ಲಿ ಕಟ್ಟಡ ನಿರ್ವಹಣೆ, ಶುಚಿತ್ವ ಕಾಣದೆ ದಿನೇದಿನೆ ವಾಣಿಜ್ಯ ಚಟುವಟಿಕೆಯಿಂದ ಕಟ್ಟಡ ದೂರವಾಗುತ್ತ ಬಂತು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಇಲ್ಲಿಂದ ಸ್ಥಳಾಂತರವಾದ ಮೇಲಂತೂ ಕಟ್ಟಡ ಮತ್ತಷ್ಟು ನಿರ್ವಹಣೆಯಿಂದ ದೂರವಾಯಿತು.
ಕಚೇರಿಗಳ ಸ್ಥಳಾಂತರ, ಶುಚಿತ್ವ, ನಿರ್ವಹಣೆ ಕೊರತೆಯಿಂದಾಗಿ ಇಲ್ಲಿನ ವಾಣಿಜ್ಯ ವ್ಯವಹಾರಗಳು ಸೊರಗಿ ವಾಣಿಜ್ಯ ಸಂಕೀರ್ಣ ನಿರ್ಲಕ್ಷ್ಯಕ್ಕೆ ಒಳಗಾಯಿತು. ಮೂರನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅಂದೇ ತಯಾರಿ ನಡೆಸಿ ಅರ್ಧಂಬರ್ಧ ಕಾಮಗಾರಿ ನಡೆಸಿ ಹಾಗೇ ಬಿಡಲಾಗಿದೆ. ಭದ್ರತೆ ಇಲ್ಲದೆ, ಅಭಿವೃದ್ಧಿಯನ್ನೂ ಕಾಣದೆ ಕಟ್ಟಡ ತನ್ನ ನಿಜರೂಪವನ್ನೇ ಕಳೆದುಕೊಂಡಿದೆ. ಎರಡನೇ ಮಹಡಿಯಲ್ಲಿನ ಅಂಗಡಿ ಮಳಿಗೆಗಳು ಖಾಲಿಯಾಗಿದ್ದು ನಿರ್ಜನ ಪ್ರದೇಶದಂತೆ ಭಾಸವಾಗುತ್ತದೆ. ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರಮುಖ ವಾಣಿಜ್ಯ ಕಟ್ಟಡವನ್ನು ಅಭಿವೃದ್ಧಿ ಪಡಿಸಬೇಕೆಂದು ಸಾರ್ವಜನಿಕರು ಬಹಳ ವರ್ಷಗಳಿಂದಲೂ ಒತ್ತಾಯ ಮಾಡುತ್ತಲೇ ಬಂದಿದ್ದರು.
ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಈ ಕಟ್ಟಡದ ಬಗ್ಗೆ ಇದೀಗ ನಗರಸಭೆ ಗಮನಹರಿಸಿದ್ದು, 1.80 ಕೋಟಿ ರೂ.ವೆಚ್ಚದಲ್ಲಿ ಕಟ್ಟಡವನ್ನು ನವೀಕರಣಗೊಳಿಸಿ ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿಸಲು ದಾಪುಗಾಲು ಇರಿಸಿದೆ. ಈ ಹಿಂದೆ ಇದ್ದ ವಾಣಿಜ್ಯ ಚಟುವಟಿಕೆಗಳು ಮತ್ತೆ ಗರಿಗೆದರುತ್ತವೆಯೇ ಕಾದು ನೋಡಬೇಕಿದೆ.
ವಾಣಿಜ್ಯ ಕೆಂದ್ರದ ಪಕ್ಕದಲ್ಲಿ ಬೆಳೆದಿದ್ದ ಗಿಡಗಂಟಿಗಳು, ಕಟ್ಟಡದ ಸುತ್ತಲೂ ಹಾಗೂ ಮೇಲೆ ಇದ್ದ ಕಸ ಕಡ್ಡಿ ತ್ಯಾಜ್ಯಗಳನ್ನು ತೆರವುಗೊಳಿಸಿ ಅನುಪಯುಕ್ತ ವಸ್ತುಗಳನ್ನು ಹೊರಸಾಗಿಸಲಾಗಿದೆ. ಖಾಲಿ ಇದ್ದ ಅಂಗಡಿಗಳ ಸ್ವಚ್ಛತಾ ಕಾರ್ಯ ನಡೆದಿದೆ. ಆವರಣದಲ್ಲಿ ಸುಸಜ್ಜಿತ ಶೌಚಗೃಹ ನಿರ್ಮಾಣ, ಸಣ್ಣಪುಟ್ಟ ರಿಪೇರಿ ಕೆಲಸ ಮಾಡಿಸಲು ನಗರಸಭೆ ಮುಂದಾಗಿದೆ.
ದುಪ್ಪಟ್ಟು ಬಾಡಿಗೆ, ಕಟ್ಟಡ ನಿರ್ವಹಣೆ ಇಲ್ಲ ಎಂದು ನಗರಸಭೆ ಹರಾಜಿನಲ್ಲಿ ಅಂಗಡಿ ಮಾಲೀಕರು ಭಾಗವಹಿಸದೆ ಇರುವ ಕಾರಣ ಬಹಳಷ್ಟು ಅಂಗಡಿ ಮಳಿಗೆಗಳು ಖಾಲಿ ಇವೆ ಎನ್ನಲಾಗಿದೆ. ಕಟ್ಟಡ ನವೀಕರಿಸಿ, ಕಡಿಮೆ ಬಾಡಿಗೆ ದರ ನಿಗದಿ ಮಾಡಿದರೆ ವಾಣಿಜ್ಯ ಚಟುವಟಿಕೆಗಳು ಮತ್ತೆ ತಲೆಎತ್ತಲು ಸಾಧ್ಯವಾಗುತ್ತದೆ ಎನ್ನುವುದು ಸಾರ್ವಜನಿಕರ ಆಭಿಪ್ರಾಯ.
ಕಟ್ಟಡದ ಆವರಣದಲ್ಲಿ ಶೌಚಗೃಹ ಇದ್ದು, ಕೆಲವು ವರ್ಷಗಳಿಂದೀಚೆಗೆ ನದಿಗೆ ಕಟ್ಟಡದ ಕೊಳಚೆ ನೀರು ಹರಿಯುತ್ತದೆ ಎನ್ನುವ ಕಾರಣದಿಂದ ಯುಜಿಡಿ ಸಂಪರ್ಕ ಇಲ್ಲದೆ ಶೌಚಗೃಹ ಬಂದ್ ಮಾಡಲಾಗಿತ್ತು. ಅದಕ್ಕೂ ಈಗ ಕಾಲ ಕೂಡಿ ಬಂದಿದ್ದು ಯುಜಿಡಿ ಪೈಪ್‌ಲೈನ್ ಅಳವಡಿಸಿ ಶೌಚಗೃಹ ಅಭಿವೃದ್ಧಿಗೆ ನಗರಸಭೆ ಮುಂದಾಗಿದೆ. ಇದರಿಂದ ವಾಣಿಜ್ಯ ಸಂಕೀರ್ಣದ ವ್ಯಾಪಾರಿಗಳ ಬಹು ದಿನದ ಬೇಡಿಕೆ ಈಡೇರಲಿದೆ.
ಸುರೇಶ್, ಅಂಗಡಿ ಮಾಲೀಕ