

ಗೌರಿಬಿದನೂರು: ಕೇವಲ ಶ್ರೀಮಂತಿಕೆಯಿಂದ ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದಾಗ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾದೀಶ ಗಣೇಶ್ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲ ಸಂಘ, ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಅಲಕಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಅಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.
ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಸಂವಿಧಾನದಲ್ಲಿ ಅನುಚ್ಚೇದ ಕಲಂ 23, 24 ಮತ್ತು 30ರಲ್ಲಿ ತಿಳಿಸಲಾಗಿದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಎಲ್ಲ ಮಕ್ಕಳು ಶಿಕ್ಷಣ ಪಡೆದು ದೇಶದ ಸಮಗ್ರ ಅಭಿವೃದ್ಧಿ ಕೈಜೋಡಿಸಬೇಕಿದೆ. ಅಪ್ರಾಪ್ತ ಮಕ್ಕಳು ಕಾರ್ಖಾನೆ ಹಾಗೂ ಅಂಗಡಿಗಳಲ್ಲಿ ಕೆಲಸ ಮಾಡಬಾರದು. ಬಾಲಕಾರ್ಮಿಕರನ್ನು ಕೆಲಸಕ್ಕೆ ಇರಿಸಿಕೊಳ್ಳುವುದು ಅಕ್ಷಮ್ಯ ಅಪರಾಧ ಎಂದರು.
ಹೆಚ್ಚುವರಿ ಪ್ರಧಾನ ನ್ಯಾಯಾದೀಶೆ ಪುಷ್ಪಾ ಮಾತನಾಡಿ, ಕೋವಿಡ್-19 ಬಳಿಕ ಅದೆಷ್ಟೋ ಮಕ್ಕಳು ಬಡತನದಿಂದ ಶಿಕ್ಷಣವಂಚಿತರಾಗಿದ್ದಾರೆ. ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ದೂರ ಉಳಿಸಬಾರದು. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಪ್ರತಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಬಾಲಕಾರ್ಮಿಕ ಪದ್ಧತಿ ದೇಶಕ್ಕೆ ಮಾರಕ. ಇದನ್ನು ನಿವಾರಿಸಲು ಎಲ್ಲರೂ ಶ್ರಮಿಸೋಣ ಎಂದರು. ಬಾಲಕಾರ್ಮಿಕರು ಕಂಡುಬಂದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಬಾಲಕಾರ್ಮಿಕ ಪದ್ಧತಿ ಅನುಸರಿಸುತ್ತಿರುವವರಿಗೆ 2 ವರ್ಷ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗುವುದು. ಆರೋಪಿಗೆ ಜಾಮೀನು ರಹಿತ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಎಚ್ಚರಿಸಿದರು.
ಕಾರ್ಮಿಕ ನಿರೀಕ್ಷಕ ಸತೀಶ್, ವಕೀಲ ಸಂಘದ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಬಿ.ಲಿಂಗಪ್ಪ, ಪ್ರಭಾಕರ್, ಸರ್ಕಾರಿ ಅಭಿಯೋಜಕ ಯಾಜ್ ಪಟೇಲ್, ಮುಖ್ಯಶಿಕ್ಷಕ ಲಕ್ಷ್ಮೀಕಾಂತ್, ನ್ಯಾಯಾಲಯ ಸಿಬ್ಬಂದಿ ಭಾಗವಹಿಸಿದ್ದರು.