

ನಂಜನಗೂಡು: ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 1.62 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಾಸಕ ದರ್ಶನ್ ಧ್ರುವನಾರಾಯಣ ಭೂಮಿಪೂಜೆ ನೆರವೇರಿಸಿದರು.
ನಂಜನಗೂಡು ನಗರಸಭೆಯ ದೇವಿರಮ್ಮನಹಳ್ಳಿಯ ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ನವೀಕರಿಸುವ ಕಾಮಗಾರಿ, ವಿ.ಎ ಬಡಾವಣೆಯಲ್ಲಿ ಸಿಸಿ ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ, ವೀರಭದ್ರಪ್ಪ ಲೇಔಟ್‌ನಲ್ಲಿ ಸಿಸಿ ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ, ರಾಮಸ್ವಾಮಿ ಬಡಾವಣೆಯಲ್ಲಿ ಸಿಸಿ ಚರಂಡಿ ಹಾಗೂ ರಸ್ತೆ ಡಾಂಬರೀಕರಣ, ನಗರಸಭೆಯ ವಾರ್ಡ್ ನಂಬರ್ 21ರ ಪಿ.ಟಿ ಬಡಾವಣೆಯಲ್ಲಿ ಸಿಸಿ ಚರಂಡಿ, ರಸ್ತೆ ನಿರ್ಮಾಣ ಕಾಮಗಾರಿ, ಚಿದಂಬರ ಬಡಾವಣೆಯಲ್ಲಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ನಂಜನಗೂಡು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಹಾಗೆಯೇ ಅಂಗನವಾಡಿ ಕಟ್ಟಡ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಮತ್ತು ಶೌಚಗೃಹ ಸೇರಿದಂತೆ ವಿವಿಧ ಕಟ್ಟಡಗಳನ್ನು ಉದ್ಘಾಟನೆ ಮಾಡಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಾನು ನಡೆದುಕೊಂಡಿದ್ದೇನೆ. ಕಳೆದ ಒಂದು ವಾರದಿಂದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುತ್ತಾ ಬಂದಿದ್ದೇನೆ. ಸುಮಾರು 9.37 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ಉಪಾಧ್ಯಕ್ಷೆ ರಿಯಾನಾ ಬಾನು, ನಗರಸಭಾ ಪೌರಾಯುಕ್ತ ನಂಜುಂಡಸ್ವಾಮಿ, ನಗರಸಭಾ ಸದಸ್ಯರಾದ ಮಹೇಶ್, ನಗರಸಭಾ ಇಂಜಿನಿಯರ್ ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.