ಅಪಾರ್ಟ್‌ಮೆಂಟ್ ಕಡಿಮೆ ದರದಲ್ಲಿ ಗುಣಮಟ್ಟದ ವಿನ್ಯಾಸಕ್ಕೆ ಡೆವಲಪರ್‌ಗಳ ಆದ್ಯತೆ

1
Published on

ಬೆಂಗಳೂರು: ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರ ಬಹಳಷ್ಟು ಬೆಳವಣಿಗೆ ಹೊಂದಿದ್ದು, ಈ ಹಿಂದೆ ಭೂಮಿ ಖರೀದಿ, ಪ್ರಾಪರ್ಟಿಗೆ ಮಾರುಕಟ್ಟೆ ಹುಡುಕಾಟ ಈ ಹಂತಗಳನ್ನು ದಾಟಿ ಇಂದು ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದೆ. ಕಾರಣ ಮಧ್ಯಮ ಆದಾಯ ವರ್ಗ ಪ್ರಾಪರ್ಟಿ ಖರೀದಿಗೆ ಆತ್ಯುತ್ತಾಹ ತೋರಿಸುತ್ತಿರುವುದು.

ಈಗ ನಿವೇಶನ ಖರೀದಿಸಿ, ನಿಂತು ಮನೆ ಕಟ್ಟುವ ಕಾಲ ಇಲ್ಲ. ಅಷ್ಟು ಸಮಯ ಹಾಗೂ ತಾಳ್ಮೆಯೂ ಜನರಲ್ಲಿ ಇಲ್ಲ. ಅಲ್ಲದೆ ಆರ್ಥಿಕವಾಗಿಯೂ ಅದು ದುಬಾರಿ ಎಂಬ ಕಾರಣಕ್ಕೆ ಜನರು ಅಪಾರ್ಟ್‌ಮೆಂಟ್ ಸಂಸ್ಕೃತಿಗೆ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಜೊತೆಗೆ ವಿನೂತನ ವಿನ್ಯಾಸ ಈ ಅಂಶಗಳಿಗೆ ಡೆವಲಪರ್‌ಗಳು ಆದ್ಯತೆ ನೀಡುತ್ತಿದ್ದಾರೆ.

ಹಿಂದೆಲ್ಲಾ ಅವಿಭಕ್ತ ಕುಟುಂಬ ಪದ್ಧತಿ ಇದಿದ್ದರಿಂದ ಜನರು ಹೆಚ್ಚು ಕೋಣೆಗಳನ್ನು ಹೊಂದಿರುವ ಮನೆ ಬಯಸುತ್ತಿದ್ದರು. ಅದೇ ರೀತಿ ನಿರ್ಮಿಸುತ್ತಿದ್ದರು. ಆದರೆ ನಂತರದಲ್ಲಿ ವಿಭಕ್ತ ಕುಟುಂಬ ಹೆಚ್ಚು ಜಾರಿಯಲ್ಲಿದ್ದ ಕಾರಣ ಒಂದು ಕೊಠಡಿಯ (1ಬಿಎಚ್‌ಕೆ) ಮನೆಗೆ ಆದ್ಯತೆ ಹಾಗೂ ಬೇಡಿಕೆ ಹೆಚ್ಚಾಯಿತು. ಇತ್ತೀಚಿನ ದಿನಗಳಲ್ಲಿ ಪುನಃ ಮಕ್ಕಳು ಪೋಷಕರೊಂದಿಗೆ ವಾಸಿಸಲು ಬಯಸುತ್ತಿದ್ದು, ಅದರಲ್ಲಿಯೇ ಪ್ರತ್ಯೇಕತೆ ಹಾಗೂ ಖಾಸಗೀತನಕ್ಕಾಗಿ ಹೆಚ್ಚು ಕೊಠಡಿಗಳಿರುವ ಮನೆಗಳನ್ನು ಬಯಸುತ್ತಿದ್ದಾರೆ. ಇದೆಲ್ಲದರ ಜೊತೆಗೆ ಭದ್ರತೆ ಹಾಗೂ ಹಲವು ಸೌಲಭ್ಯಗಳು ಒಂದೆಡೆ ಪಡೆಯುವ ಹಂಬಲ ಹೊಂದಿದ್ದಾರೆ. ಹಾಗಾಗಿ ಅಪಾರ್ಟ್‌ಮೆಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಇದರಿಂದಾಗಿ ಈಗ ವಸತಿ ಮಾರುಕಟ್ಟೆಯಲ್ಲಿ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ 1 ಬಿಎಚ್‌ಕೆ, 2 ಬಿಎಚ್‌ಕೆ, 3 ಬಿಎಚ್‌ಕೆ ವಿನ್ಯಾಸ ಜನಪ್ರಿಯವಾಗುತ್ತಿದೆ. ಇದರಲ್ಲಿಯೂ ಒಂದು ಕೊಠಡಿಗೆ ಸ್ವತಂತ್ರ ಪ್ರವೇಶ ಅವಕಾಶ ಇರುವಂತೆಯೂ ನಿರ್ಮಿಸಲಾಗುತ್ತಿದೆ.

ಸ್ಮಾರ್ಟ್ ಹೋಮ್: ಸೆನ್ಸಾರ್ ಮತ್ತು ರೆಡಿಯೋ ನಿಯಂತ್ರಣದ ಮೂಲಕ ಸ್ಮಾರ್ಡ್ ಹೋಮ್‌ಗಳಿಗೆ ಮೊದಲು ಭದ್ರತಾ ವ್ಯವಸ್ಥೆ ಮತ್ತು ಲೈಟಿಂಗ್ ನಿಯಂತ್ರಣ ವ್ಯವಸ್ಥೆಯ ತಂತ್ರಜ್ಞಾನ ಬಳಸಲಾಗುತ್ತಿತ್ತು. ಈಗ ತಂತ್ರಜ್ಞಾನ ಅಗ್ಗದ ಲಭ್ಯವಾಗುವುದರಿಂದ ಇತರ ಭಾಗಗಳಿಗೂ ಅದು ಪಸರಿಸಿದೆ. ಮೊಬೈಲ್ ಕಂಪ್ಯೂಟಿಂಗ್, ಟಚ್ ಸ್ಕ್ರೀನ್ ತಂತ್ರಜ್ಞಾನಗಳಿಂದಾಗಿ ಮನೆಯೇ ಒಂದು ತಂತ್ರಜ್ಞಾನ ಕೇಂದ್ರವಾಗುತ್ತಿದೆ. ಇದಕ್ಕೆ ಸರಿಯಾಗುವಂತೆ ಮನೆಯ ವಿನ್ಯಾಸವನ್ನು ಡೆವಲಪರ್ ಮಾಡಬೇಕಾಗುತ್ತದೆ.

ಅಪೂರ್ಣ ಕಾಮಗಾರಿ: ಅಪಾರ್ಟ್‌ಮೆಂಟ್‌ಗಳಲ್ಲಿ ಅಪೂರ್ಣ ಕಾಮಗಾರಿ ಮನೆಗಳನ್ನೇ ನೀಡಲಾಗುತ್ತದೆ. ಆದರೆ ಇದು ಗ್ರಾಹಕರಿಗೆ ಇಷ್ಟವಾಗುಂತೆಯೂ ಇರಬೇಕು. ಅದಕ್ಕಾಗಿ ಪ್ಲಾಸ್ಟಿಂಗ್ ಅಗತ್ಯವಿಲ್ಲದ ಮೋಲ್ಡ್ ಇಟ್ಟಿಯ ಗೋಡೆ, ನೆಲಕ್ಕೆ ಗಾರೆ, ಗೋಡೆ ಅಥವಾ ನೆಲಕ್ಕೆ ಅಲ್ಲಲ್ಲಿ ಕಲ್ಲು ಆಕರ್ಷಕ ಚಪ್ಪಡಿಗಳನ್ನು ಅಳವಡಿಸಲಾಗುತ್ತದೆ. ಇದು ನೋಡಲು ಅಷ್ಟು ಸುಂದರವಾಗಿ ಕಾಣದಿದ್ದರೂ ಗ್ರಾಹಕನ ಮನಸ್ಸಿಗೆ ತೃಪ್ತಿ ನೀಡುತ್ತದೆ. ಜೊತೆಗೆ ಕಡಿಮೆ ಬಜೆಟ್. ಕೆಲ ಸಮಯ ಯಾವುದೇ ಬದಲಾವಣೆ ಮಾಡದೆ ಅದರಲ್ಲೇ ವಾಸಿಸಬಹುದು. ಅಗತ್ಯ ಇರುವವರು ಇವುಗಳನ್ನು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳಬಹುದು.

ಹಸಿರಿಗೆ ಆದ್ಯತೆ: ನಗರದ ಬೆಳೆದಂತೆ ಜನ ದಟ್ಟಣೆ ಹೆಚ್ಚಾಗಿ ಮನೆ ಎದುರು ಗಾರ್ಡನ್ ಮಾಡುವುದಿರಲಿ ಅಗತ್ಯಕ್ಕಾಗಿ ಒಂದು ಮರ ಸಹ ಬೆಳಸುವಷ್ಟ ಜಾಗ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ತೋಟಗಾರಿಕೆ ತಂತ್ರಜ್ಞಾನ ನೆರವಿಗೆ ಬಂದಿದೆ. ಈಗ ಗೋಡೆಯ ಮೇಲೆ, ಬಾಲ್ಕನಿಯಲ್ಲೂ ಪಾಟ್ ಮೂಲಕ ಗಿಡ ಬೆಳೆಸಲು ಸಾಧ್ಯವಾಗುತ್ತದೆ. ಇದಕ್ಕೆ ಹನಿ ನೀರಾವರಿ ತಂತ್ರಜ್ಞಾನದಿಂದ ನೀರುಣಿಸಲಾಗುತ್ತದೆ. ಇದರಿಂದ ಮನೆಯ ಸುತ್ತ ಹಸಿರು ಮತ್ತೆ ಕಂಗೊಳಿಸುವಂತಾಗುತ್ತದೆ. ಛಾವಣಿಯ ಮೇಲೆ ಹುಲ್ಲು, ಚಿಕ್ಕ ಗಿಡಗಳನ್ನು ಕೂಡ ಬೆಳೆಸಲು ಸಾಧ್ಯವಾಗುತ್ತದೆ. ದಿನನಿತ್ಯದ ಅಡುಗೆಗೆ ತರಕಾರಿ ಮನೆಯಲ್ಲೇ ಬೆಳೆಯಲು ಸಾಕಷ್ಟು ಸ್ಥಳಾವಕಾಶ ಇಲ್ಲ. ಹೀಗಾಗಿ ಸುಧಾರಿತ ತಂತ್ರಜ್ಞಾನದ ಮೂಲಕ ಪಾಟ್‌ಗಳಲ್ಲೇ ಅದನ್ನು ಬೆಳೆಸಲು ಕೂಡ ಈಗ ಸಾಧ್ಯವಾಗುತ್ತಿದೆ. ಇದಕ್ಕೆ ಪೂರಕ ವ್ಯವಸ್ಥೆ ಮಾಡಬೇಕಾಗುತ್ತದೆ.

ಎಮಿನಿಟೀಸ್: ಅಪಾರ್ಟ್‌ಮೆಂಟ್‌ನಲ್ಲಿ ಮನೆ ಹೊಂದಲು ಬಯಸುವವರು ಎಮಿನಿಟೀಸ್ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಈಜುಕೊಳ, ನಡಿಗೆ ಪಥ, ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ಕ್ಲಬ್ ಹೌಸ್, ಥಿಯೇಟರ್, ಅಗತ್ಯ ವಸ್ತುಗಳ ಖರೀದಿಗೆ ಮಾಲ್ ಸೇರಿ ಪ್ರತಿಯೊಂದು ಅಪಾರ್ಟ್‌ಮೆಂಟ್ ಆವರಣದಲ್ಲಿ ದೊರೆಯುವಂತೆಯೂ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕಾಗುತ್ತಿದೆ.

ಒಟ್ಟಾರೆಯಾಗಿ ದಶಕದಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದು,ಅದೇ ರೀತಿ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ವಿನ್ಯಾಸದಲ್ಲೂ ಸೌಲಭ್ಯ ಒದಗಿಸುವಲ್ಲಿಯೂ ಬಹಳಷ್ಟು ಬದಲಾವಣೆಗಳು ಆಗುತ್ತಿವೆ. ಗ್ರಾಹಕರ ಇಚ್ಚೆಗೆ ಅನುಗುಣವಾಗಿ ಅಂತಹ ಸೌಲಭ್ಯ ಒದಗಿಸಲು ಡೆವಲಪರ್‌ಗಳು ಆದ್ಯತೆ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net