

ಸಿದ್ದಾಪುರ: ನಿಲ್ಕುಂದ- ಬಡಾಳ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿ ನಿಲ್ಕುಂದದಿಂದ ಕರ್ಮನಘಟಗಿ ಮೂಲಕ ತಾಲೂಕಿನ ಗಡಿಪ್ರದೇಶವಾದ 8 ಕಿ.ಮೀ. ದೂರದ ಪರಲಮಾರಿಗೆ ಗುರುವಾರ ನೂರೈವತ್ತಕ್ಕೂ ಹೆಚ್ಚು ಜನರು ಪಾದಯಾತ್ರೆ ನಡೆಸಿದರು.
ಪಾದಯಾತ್ರೆಯಲ್ಲಿ ಹೆಗ್ಗರಣಿ, ತಂಡಾಗುಂಡಿ ಗ್ರಾಪಂನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿಲ್ಕುಂದ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಸಾಮಾಜಿಕ ಹೋರಾಟ ರವೀಂದ್ರ ನಾಯ್ಕ ಅವರು, ‘ನಿಲ್ಕುಂದ- ಬಡಾಳ- ಕುಮಟಾ ರಸ್ತೆ ಇದು ಹಳೆಯ ರಸ್ತೆ. ಬ್ರಿಟಿಷರು ನಿರ್ವಿುಸಿದ ರಸ್ತೆ ಆಗಿದೆ. ನಂತರ ಇದರ ನಿರ್ವಹಣೆ ಇಲ್ಲದೆ ಅನಾಥವಾಗಿ ಬಿದ್ದಿದೆ. ಈಗ ರಸ್ತೆಯನ್ನು ಹೊಸತಾಗಿ ಮಾಡಬೇಕಾದದ್ದಿಲ್ಲ. ಲೋಕೋಪಯೋಗಿ ಇಲಾಖೆಯ ದಾಖಲೆಯಲ್ಲಿ ಈ ರಸ್ತೆ ಇದೆ. ಇದರ ನಿರ್ವಹಣೆ ಮಾಡಿ ಜನತೆಯ ಹಾಗೂ ವಾಹನ ಸಂಚಾರಕ್ಕೆ ತಕ್ಷಣ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಮತ್ತಷ್ಟು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಪ್ರತಿ ವರ್ಷ ಲೋಕೋಪಯೋಗಿ ಇಲಾಖೆ ಈ ರಸ್ತೆ ನಿರ್ವಹಣೆಗೆಂದು ಲಕ್ಷಗಟ್ಟಲೆ ಹಣವನ್ನು ವ್ಯಯಮಾಡುತ್ತಿದೆ. ಆದರೂ ಯಾಕೆ ರಸ್ತೆ ಅಭಿವೃದ್ಧಿ ಆಗಿಲ್ಲ’ ಎಂದು ಪ್ರಶ್ನಿಸಿದರು.
ಅರಣ್ಯ ಇಲಾಖೆಯವರು ರಸ್ತೆ ಅಭಿವೃದ್ಧಿಗೆ ಯಾವುದೇ ತೊಂದರೆ ಅಥವಾ ಹಸ್ತಕ್ಷೇಪ ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆ ಸ್ಥಳಕ್ಕೆ ಸಿದ್ದಾಪುರ ಸಿಪಿಐ ಎನ್. ಮಹೇಶ, ಶಿರಸಿ ಸಿಪಿಐ ಪ್ರಮೋದ, ಪಿಎಎಸ್ಐ ಮಂಜುನಾಥ ರ್ಬಾ, ಜಾನ್ಮನೆ ವಲಯದ ಉಪವಲಯ ಅರಣ್ಯಾಧಿಕಾರಿ ಹರಿಣ ಗ್ರೀಶ್, ಲೋಕೋಪಯೋಗಿ ಇಂಜಿನಿಯರ್ ಶಿವಪ್ರಕಾಶ, ಕುಮಟಾ ತಾಲೂಕು ಇಂಜಿನಿಯರ್ ಸೋಮನಾಥ ಭಂಡಾರಿ, ಕುಮಟಾ ಪಿಎಸ್ಐ ಆನಂದ ಮೂರ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಟಿ, ರಸ್ತೆ ಸುಧಾರಿಸುವ ಭರವಸೆ ನೀಡಿದರು.
ಹರಿಹರ ನಾಯ್ಕ, ಸೀತಾರಾಮ ಗೌಡ ಕುಳ್ಳೆ, ಎಂ.ಪಿ. ಗೌಡ, ಬೀರಾ ಗೌಡ, ಎಂ.ಬಿ. ಹೆಗಡೆ, ರಮೇಶ ಗೌಡ, ದ್ಯಾವಾ ಗೌಡ, ಅಬ್ದುಲ್ ಬ್ಯಾರಿ, ಸವಿತಾ ಗೌಡ, ಪಾರ್ವತಿ ಗೌಡ, ರಾಘವೇಂದ್ರ ನಾಯ್ಕ, ಮಧುರಾ, ಅನ್ನಪೂರ್ಣ ಚೆನ್ನಯ್ಯ, ರವೀಶ ಗೌಡ, ಇತರರು ಪ್ರತಿಭಟನೆಯಲ್ಲಿ ಇದ್ದರು.
ತಟ್ಟಿಕೈ ರಾಮ ಭಟ್ಟರ ಕನಸು: ಹಿರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದ ದಿ.ತಟ್ಟಿಕೈ ರಾಮ ಭಟ್ಟ ಅವರು ನಿಲ್ಕುಂದ- ಬಡಾಳ- ಕುಮಟಾ ರಸ್ತೆ ಆಗಬೇಕು ಎಂದು ಹಲವು ವರ್ಷಗಳ ಹಿಂದೇ ಆಗ್ರಹಿಸಿದ್ದರು. ಆದರೆ, ಆಗ ಸಫಲವಾಗಲಿಲ್ಲ. ಈಗ ಅವರ ಕನಸು ನನಸಾಗುವ ಸಮಯ ಬಂದಿದೆ ಎಂದು ರವೀಂದ್ರ ನಾಯ್ಕ ಹೇಳಿದರು.
ನಿಲ್ಕುಂದ ಗ್ರಾಪಂ ಹೇಳಿಕೆಗೆ ಖಂಡನೆ: ನಿಲ್ಕುಂದ- ದೇವಿಮನೆ- ಕುಮಟಾ ರಸ್ತೆ ಅಭಿವೃದ್ಧಿ ಕುರಿತು ಪಾದಯಾತ್ರೆ ನಡೆಸುವುದನ್ನು ನಿಲ್ಕುಂದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಎಲ್ಲ ಸದಸ್ಯರು ವಿರೋಧಿಸಿದ್ದರು. ಅಲ್ಲದೆ, ಬೆಂಬಲವಿಲ್ಲ ಎಂದಿದ್ದರು. ಇದನ್ನು ಖಂಡಿಸಿದ ಪ್ರತಿಭಟನಾಕಾರರು ಗ್ರಾಪಂ ಎದುರೇ ಅವರ ಹೇಳಿಕೆಯ ಪ್ರತಿಯನ್ನು ಪಾದಯಾತ್ರೆಯ ಆರಂಭದಲ್ಲಿ ಸುಟ್ಟು ಹಾಕಿದರು. ‘ನಾವು ಯಾವುದೇ ಪ್ರಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲ. ರಸ್ತೆ ಅಭಿವೃದ್ಧಿ ಆಗಬೇಕು ಎನ್ನುವುದು ನಮ್ಮೆಲ್ಲರ ಉದ್ದೇಶ. ಇದರಲ್ಲಿ ಯಾರೂ ರಾಜಕೀಯ ಮಾಡಬಾರದೆಂದು ಸೀತಾರಾಮ ಗೌಡ, ನಾಗಪತಿ ಗೌಡ ಮತ್ತಿತರರು ಹೇಳಿದರು.
ನಿಲ್ಕುಂದ- ದೇವಿಮನೆ- ಕುಮಟಾ ರಸ್ತೆಯನ್ನು ಎಂಟು ದಿನದಲ್ಲಿ ಪ್ರಾರಂಭಿಸಿ ಒಂದು ತಿಂಗಳೊಳಗಾಗಿ ತಾತ್ಪೂರ್ತಿಕವಾಗಿ ಪೂರ್ಣಗೊಳಿಸಲಾಗುವುದು. ಅವಶ್ಯ ಇರುವ ಹಾಗೂ ಸರ್ವಋತು ರಸ್ತೆಯನ್ನಾಗಿ ಮಾಡುವುದಕ್ಕೆ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು.| ಎಂ.ಎಚ್. ಮುದುಕಣ್ಣ, ಲೋಕೋಪಯೋಗಿ ಇಲಾಖೆ ಇಂಜಿನಿಯರ್, ಸಿದ್ದಾಪುರ