

ಗೋಣಿಕೊಪ್ಪ: ಪ್ರಾಚೀನ ಭಾಷೆಯಾಗಿರುವ ಕನ್ನಡವನ್ನು ಹಲವಾರು ಸಾಹಿತಿಗಳು, ಸಂತರು ಬೆಳೆಸಿದ್ದಾರೆ. ಧೀಮಂತ ಭಾಷೆಯಾಗಿರುವ ಕನ್ನಡವನ್ನು ಎಲ್ಲರೂ ಉಳಿಸಿ ಬೆಳೆಸಬೇಕು ಎಂದು ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಎಂ.ಬಿ. ಕಾವೇರಿಯಪ್ಪ ಕರೆ ನೀಡಿದರು.
ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಮತ್ತು ಪದವಿ ಪೂರ್ವ ಕಾಲೇಜು ಕನ್ನಡ ಭಾಷಾ ವಿಭಾಗ ಮತ್ತು ಕನ್ನಡ ವಿದ್ಯಾರ್ಥಿ ಬಳಗದ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಸಂಭ್ರಮ- 50ರ ಪ್ರಯುಕ್ತ ನುಡಿನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಚೀನ ಭಾಷೆಗಳಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುವ ಕನ್ನಡ ಭಾಷೆಯನ್ನು ಸ್ವಾಭಿಮಾನದಿಂದ ಬೆಳೆಸುವಂತಾಗಬೇಕು ಎಂದರು.
ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೊದಲೈ ಮುತ್ತು ಮಾತನಾಡಿ, ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡದ ಮೇಲಿರುವ ಪ್ರೀತಿ ಕುಂಠಿತವಾಗುತ್ತಿದೆ. ಇದರಿಂದ ಕನ್ನಡ ಭಾಷೆ ಮಾತನಾಡುವವವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಕನ್ನಡ ಭಾಷೆ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಸಂತ ಅನ್ನಮ್ಮ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಅರ್ಜುನ್ ಮೌರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ವಿರಾಜಪೇಟೆ ತಾಲೂಕು ಘಟಕದ ಅದ್ಯಕ್ಷ ಡಿ.ಪಿ.ರಾಜೇಶ್ ಪದ್ಮನಾಭ ಮತ್ತು ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿದರು.
ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ಐಸಾಕ್ ರತ್ನಾಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೊಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಬಿ.ಕಾವೇರಿಯಪ್ಪ ಮತ್ತು ಕಸಾಪ ತಾಲೂಕು ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ ಹಾಗೂ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ್ ಮೌರ್ಯ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಉಪನ್ಯಾಸಕಿ ಅಶ್ವಿನಿ ಮಂಜುನಾಥ್, ಪದವಿ ಪೂರ್ವ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೇಮಂತ್ ಕುಮಾರ್, ಸಹ ಪ್ರಾಧ್ಯಾಪಕಿ ಪ್ರತಿಮಾ ಹರೀಶ್ ರೈ ಹಾಜರಿದ್ದರು.
ಕನ್ನಡ ಭಾಷೆಯ ಗತಕಾಲದ ವೈಭವ, ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಪ್ರಕಾರಗಳು ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು.