ಮಕ್ಕಳಲ್ಲಿ ಗಿಡಗಳನ್ನು ಬೆಳೆಸುವ ಸಂಸ್ಕೃತಿ ಬೆಳೆಸಿ

12-.kkr.2(6-24
Published on

ಕಿಕ್ಕೇರಿ: ಮರ-ಗಿಡಗಳು ನಮ್ಮ ಬದುಕಿನ ಜೀವವಾಗಿದ್ದು, ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಉಳಿಸುವ ಅರಿವು ಮೂಡಿಸಲು ಎಲ್ಲರೂ ಮುಂದಾಗಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಎಂ. ವೀರೇಶಪ್ಪ ತಿಳಿಸಿದರು.


ಸಮೀಪದ ಮಾಕವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾರ್ಥಕ್ಕೆ ಮರ ಕಡಿದು ನಾಡು ಮಾಡುವ ನಾವು ಗಿಡಗಳನ್ನು ಬೆಳೆಸಲು ಮರೆತಾಗಿದೆ. ಪರಿಣಾಮ ಬರಗಾಲ, ಅಕಾಲಿಕ ಮಳೆ, ಸುನಾಮಿಯಂತಹ ಹತ್ತಾರು ಸಮಸ್ಯೆಗಳು ಉಲ್ಬಣಿಸುತ್ತಿವೆ. ಶುದ್ಧ ಗಾಳಿ ಸಿಗದೆ ಕೋವಿಡ್ ವೇಳೆ ಸಾವಿರಾರು ಜನ ಮರಣ ಹೊಂದಿರುವುದನ್ನು ಮರೆಯಬಾರದು ಎಂದರು.


ವಾಯು ಮಾಲಿನ್ಯದಿಂದ ಪ್ರಾಕೃತಿಕ ವಿಕೋಪ, ಪರಿಸರ ಸರಪಳಿ ಬದಲಾಗುತ್ತಿದೆ. ಇನ್ನಾದರೂ ಎಚ್ಚರಿಕೆ ವಹಿಸಿ ಪರಿಸರ ಉಳಿಸಬೇಕಿದೆ. ಜಾಗತಿಕ ತಾಪಮಾನ ಏರುಪೇರಾದರೆ ಜೀವರಾಶಿಗಳಿಗೆ ಉಳಿಗಾಲವಿಲ್ಲ. ಸಂಸ್ಥೆ ರಾಜ್ಯಾದ್ಯಂತ ಕೆರೆಕಟ್ಟೆ ಉಳಿಸುವ, ಮರಗಿಡ ಬೆಳೆಸಲು ಹಲವಾರು ಯೋಜನೆ ಹಮ್ಮಿಕೊಂಡಿದೆ. ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.


ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳು ಗಿಡಗಳನ್ನು ಬೆಳೆಸುವ ಪ್ರತಿಜ್ಞೆ ಮಾಡಿದರು. ಮುಖ್ಯಶಿಕ್ಷಕ ಲಾಯಪ್ಪ, ಪರಿಸರ ಶಿಕ್ಷಕ ಹೇಮಂತ್‌ಕುಮಾರ್, ಚಿತ್ರಕಲಾ ಶಿಕ್ಷಕ ಪರಮೇಶ್, ವಲಯ ಮೇಲ್ವಿಚಾರಕ ಪ್ರವೀಣ್, ಸೇವಾ ಪ್ರತಿನಿಧಿ ಶೋಭಾ, ಶಿಕ್ಷಕ ಮಂಜುನಾಥ್, ಹೇಮಂತಕುಮಾರ್, ರಮೇಶ್, ವೇದಾವತಿ, ರೂಪಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net