ಅಭಿವೃದ್ಧಿ ಮಾಡಿ ಜನರಿಗೆ ಉತ್ತರ

FotoJet
Published on

ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿಕೆ | ಚಿಂತಾಮಣಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ, ಸೌಲಭ್ಯ ವಿತರಣೆ

ಚಿಂತಾಮಣಿ : ರಾಜಕಾರಣ ಬದಿಗೊತ್ತಿ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. ಆದರೆ, ಆಕಾಶಕ್ಕೆ ಮೆಟ್ಟಿಲು ಹಾಕಿದರೂ ವಿರೋಧ ಪಕ್ಷದವರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಅಭಿವೃದ್ಧಿ ಮೂಲಕವೇ ಜನರಿಗೆ ನೀಡುತ್ತೇನೆ ಎಂದು ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು.

ನಗರದ ಅರಳೀಕಟ್ಟೆ ಪಕ್ಕದಲ್ಲಿರುವ ಸೊಣ್ಣಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಾಲಯದ ನಗರಸಭೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ, ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಹಾಗೂ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮಾಜಿ ಶಾಸಕರು ಎಲ್ಲ ಅಭಿವೃದ್ದಿ ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡಿದ ಪರಿಣಾಮ ಯಾವುದೇ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಹಾಗೂ ನಗರದ ರಸ್ತೆಗಳಿಗೆ ಬಳಸಬೇಕಾದ ನಗರೋತ್ಥಾನ ಯೋಜನೆ ಹಣವನ್ನು ಅವಶ್ಯಕತೆಯಿಲ್ಲದ ಯೋಜನೆಗೆ ಹೆಚ್ಚು ಬಳಸಿ ಅಭಿವೃದ್ದಿ ತಿಲಾಂಜಲಿ ಹಾಡಿದ್ದಾರೆ ಎಂದರು.ಅಮೃತ್ ನಗರೋತ್ಥಾನ ಯೋಜನೆಯಲ್ಲಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಉದ್ದೇಶಿಸಿರುವ ನೆಕ್ಕುಂದಿ ಕೆರೆ ಯೋಜನೆ ವೆಚ್ಚ ಈಗ 30 ಕೋಟಿಯಿಂದ 80 ಕೋಟಿ ರೂ.ಗಳಿಗೆ ಏರಿದ್ದು, ಅದನ್ನು ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ ಸಚಿವರು, ಕನ್ನಂಪಲ್ಲಿ ಕೆರೆ ಅಭಿವೃದ್ದಿಗೂ ಹೆಚ್ಚುವರಿ ಹಣ ಒದಗಿಸುವುದಾಗಿ ಹೇಳಿದರು.ನಗರದಲ್ಲಿ ಝಾನ್ಸಿ ರಾಣಿ ಮೈದಾನ, ಮಾಳಪಲ್ಲಿಯಿಂದ ಕೋಲಾರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ, ರಾಮಕುಂಟೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್, ಬಸ್ ನಿಲ್ದಾಣ, ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ, ಐಡಿಎಸ್‌ಎಂಟಿ ಮಾರುಕಟ್ಟೆಯ ಮೇಲೆ ಬೀದಿಬದಿ ವ್ಯಾಪಾರಸ್ಥರಿಗೆ ಅಂಗಡಿಗಳ ವ್ಯವಸ್ಥೆ, ನಗರದಲ್ಲಿ ಅಂಬೇಡ್ಕರ್, ವಾಲ್ಮೀಕಿ ಭವನಕ್ಕೆ ಹೆಚ್ಚುವರಿ ಹಣ ಮಂಜೂರಾಗಿರುವ ಬಗ್ಗೆ ವಿವರವಾಗಿ ತಿಳಿಸಿದರು. ಅಂಗವಿಕಲರಿಗೆ 2 ಕೋಟಿ ರೂ. ವೆಚ್ಚದಲ್ಲಿ 200ಕ್ಕೂ ಹೆಚ್ಚು ತ್ರಿಚಕ್ರವಾಹನ ವಿತರಣೆ ಮಾಡಲಾಗಿದೆ. ಟೈಡ್ ಮತ್ತು ಬೋರ್ಡಾ ಸಂಸ್ಥೆ ನೀಡಿರುವ 30 ಲಕ್ಷ ರೂ. ಮವಲ್ಯದ ಯಂತ್ರೋಪಕರಣಗಳು, ಡಿಸ್ಪೋಸಬಲ್ ವಾಟರ್‌ಬಾಟಲ್ ಸಂಗ್ರಹಣೆಗೆ ನಾಲ್ಕು ಬೃಹತ್ ಗಾತ್ರದ ಸ್ಟ್ಯಾಂಡ್‌ಗಳು, 50 ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, 250 ಬೀದಿಬದಿ ವ್ಯಾಪಾರಿಗಳಿಗೆ ಗುರುತಿನಚೀಟಿ ವಿತರಿಸಲಾಯಿತು ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ತಹಸೀಲ್ದಾರ್ ಸುದರ್ಶನ್ ಯಾದವ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಕೆ.ಮಾಧವಿ, ನಗರಸಭೆ ಸದಸ್ಯರಾದ ಹರೀಶ್, ಜಗದೀಶ್, ಅಕ್ಷಯ ಮಾತನಾಡಿದರು. ನಗರಸಭೆ ಅಧ್ಯಕ್ಷ ಅರ್.ಜಗನ್ನಾಥ, ಉಪಾಧ್ಯಕ್ಷೆ ರಾಣಿಯಮ್ಮ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ್, ಪೌರಾಯುಕ್ತ ಜಿ.ಎನ್.ಚಲಪತಿ, ಟೈಡ್ ಮತ್ತು ಬೋರ್ಡಾ ಸಂಸ್ಥೆಯ ಅರ್ಜುನ್ ಮತ್ತು ಪ್ರಿಯಾ ಮುಂತಾದವರು ಹಾಜರಿದ್ದರು.

ಸ್ವಚ್ಛತೆಗೆ ಆದ್ಯತೆ

ನಾನು ಈ ಹಿಂದೆ ಶಾಸಕನಾಗಿದ್ದಾಗ ಸ್ವಚ್ಛನಗರ ಪರಿಕಲ್ಪನೆಯಲ್ಲಿ ನಗರಸಭೆಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿತ್ತು. ನಂತರ ಏನಾಯಿತು ಎಂದು ಪ್ರಶ್ನಿಸಿದ ಸುಧಾಕರ್, ಇದೀಗ ನಗರದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್ ನಿಯಂತ್ರಣ, ಮನೆ ಕಸಕ್ಕೆ ಟಿಪ್ಪರ್ ವಾಹನ ಮತ್ತು ತಳ್ಳುವ ಬಂಡಿಗಳನ್ನು ವ್ಯವಸ್ಥೆ ಮಾಡಿದ್ದು, ಕಸ ಗುಡಿಸಲು ವಾಹನ ಮತ್ತು ಒಳಚರಂಡಿ ಸ್ವಚ್ಛತೆಗೆ ಮತ್ತೊಂದು ಜಟ್ಟಿಂಗ್ ವಾಹನ ಖರೀದಿ ಮಾಡಿದ್ದು ಇಂದು ಚಾಲನೆ ನೀಡಲಾಗಿದೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.

12ನೇ ವಾರ್ಡ್‌ಗೆ 4.5 ಕೋಟಿ

ಹಿಂದಿನ ಶಾಸಕ ಅವಧಿಯಲ್ಲಿ ನಗರದ ರಸ್ತೆಗಳು ಹಾಳಾದವು, ಒಳಚರಂಡಿ ಅಭಿವೃದ್ಧಿಯಾಗಲಿಲ್ಲ ಎಂದ ಸಚಿವರು, ಅವರ ಅವಧಿಯಲ್ಲಿ ಬಂದ 10 ಕೋಟಿ ರೂ. ವಿಶೇಷ ಅನುದಾನದಲ್ಲಿ 12ನೇ ವಾರ್ಡ್‌ಗೆ 4.5 ಕೋಟಿ ರೂ. ಕಾಮಗಾರಿಗೆ ಯೋಜನೆ ರೂಪಿಸಿದ್ದರು. ಉಳಿದಿದ್ದನ್ನು ತುಂಡು ಕೆಲಸಗಳಿಗೆ ನೀಡಿದರು. ಅಷ್ಟರಲ್ಲೇ ಚುನಾವಣೆ ಬಂದಿದ್ದರಿಂದ ಕಾಮಗಾರಿಯನ್ನು ಗುತ್ತಿಗೆದಾರರ ಮೂಲಕ ತಡೆದರು. ಹೊಸ ಸರ್ಕಾರ ಬಂದ ನಂತರ ಸದರಿ ಕಾಮಗಾರಿಗಳಿಗೆ ಮರು ಯೋಜನೆ ರೂಪಿಸಿ ಪ್ರಮುಖ ರಸ್ತೆಗಳನ್ನು ಆಭಿವೃದ್ಧಿಪಡಿಸಲಾಗುತ್ತಿದೆ ಎಂದು ಡಾ. ಎಂ.ಸಿ. ಸುಧಾಕರ್ ವಿವರಿಸಿದರು.

ಒಳಚರಂಡಿಗೆ ₹50 ಕೋಟಿ ಮಂಜೂರು

ನಗರದಲ್ಲಿ ಒಳಚರಂಡಿ ಯೋಜನೆ ಜತೆಗೆ ತ್ಯಾಜ್ಯನೀರು ಸಂಗ್ರಹಿಸಿ ಶುದ್ಧೀಕರಿಸುವ ಘಟಕ ನಿರ್ಮಾಣಕ್ಕೆ 50 ಕೋಟಿ ರೂ. ಮಂಜೂರಾಗಿದೆ. ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರಕ್ಕೂ ಹಣ ಮಂಜೂರು ಮಾಡಲಾಗಿದೆ. ನಗರದಲ್ಲಿ ಹಲವಾರು ಕಡೆ ಹೊಸದಾಗಿ ಒಳಚರಂಡಿ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು.

ಚತುಷ್ಪಥ ರಸ್ತೆ

ಚಿಂತಾಮಣಿ-ಬೆಂಗಳೂರು ನಡುವೆ ಈಗ ದ್ವಿಪಥ ರಸ್ತೆಯಿದ್ದು, ಇದನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸುವ ಯೋಜನೆ ಸಿದ್ಧವಾಗಿದ್ದು, ಶೀಘ್ರವೇ ಈ ಬಗ್ಗೆ ಸಿಹಿಸುದ್ದಿ ನೀಡುವುದಾಗಿ ಸಚಿವ ಸುಧಾಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net