

ಹೂವಿನಹಡಗಲಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಶಿಕ್ಷಕರ ಕಾರ್ಯಾಗಾರ ಪೂರಕವಾಗಲಿದೆ ಎಂದು ಬಿಇಒ ಮಹೇಶ್.ವಿ.ಪೂಜಾರ ಹೇಳಿದರು.
ಪಟ್ಟಣದ ಎಂ.ಎಂ.ಪಾಟೀಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಸಾಕ್ಷರತಾ ಶಿಕ್ಷಣ ಇಲಾಖೆ, ತಾಲೂಕು ಪ್ರೌಢ ಶಾಲಾ ಮುಖ್ಯ ಗುರುಗಳ ಸಂಘ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಜ್ಞಾನ, ಇಂಗ್ಲಿಷ್ ಕಠಿಣವಾಗುತ್ತಿದ್ದು, ಶಿಕ್ಷಕರು ವಿಷಯಗಳನ್ನು ಸರಳವಾಗಿ ಅರ್ಥೈಸುವ ಕೌಶಲ ಅಳವಡಿಸಿಕೊಳ್ಳಬೇಕು. ವಿಜ್ಞಾನ ವಿಭಾಗದಲ್ಲಿ ಚಿತ್ರಗಳಿಂದಲೇ ಅಂಕಗಳು ದೊರೆಯುತ್ತವೆ.
ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ‘ವಿಜನ್-5’ ಯೋಜನೆ
ಆದ್ದರಿಂದ ಚಿತ್ರ ರಚನೆ ಬಗ್ಗೆ ಹೆಚ್ಚು ತಿಳಿಸಬೇಕು. ಎಲ್ಲ ಶಾಲೆಗಳಲ್ಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಇಂಗ್ಲಿಷ್ ವ್ಯಾಕರಣ, ಪತ್ರ, ಪ್ರಬಂಧಗಳನ್ನು ಸುಲಭವಾಗಿ ಬರೆಯಲು ಕಲಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ನವೀನ್ ಕುಮಾರ್.ಬಿ, ಗಣೇಶ್.ಪಿ.ಶಿಕ್ಷಕರಿಗೆ ತರಬೇತಿ ನೀಡಿದರು. ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಉಪಾಧ್ಯಕ್ಷೆ ಮುದ್ದಿ ಕಸ್ತೂರಿ, ಮುಖ್ಯ ಶಿಕ್ಷಕರಾದ ಶ್ರೀಕಾಂತ್, ಸೂರ್ಯಕಾಂತ್, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್.ಮಲ್ಲಿಕಾರ್ಜುನ, ಶಿಕ್ಷಕರು ಇತರರಿದ್ದರು.