ಕಲೆಯನ್ನು ಆನಂದಿಸುವ ಪ್ರವೃತ್ತಿ ರೂಢಿಸಿಕೊಳ್ಳಿರಿ

ಕಲೆಯನ್ನು ಆನಂದಿಸುವ ಪ್ರವೃತ್ತಿ ರೂಢಿಸಿಕೊಳ್ಳಿರಿ
Published on

ಗುಂಡ್ಲುಪೇಟೆ: ಕಲೆ ಮನುಷ್ಯನ ಅವಿಭಾಜ್ಯ ಭಾಗವಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅದನ್ನು ನೋಡಿ ಆನಂದಿಸುವ ಪ್ರವೃತಿಯನ್ನು ರೂಢಿಸಿಕೊಂಡಾಗ ನಮ್ಮ ಜಂಜಾಟದಿಂದ ಬಿಡುಗಡೆ ಸಿಗುತ್ತದೆ ಎಂದು ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶೀಕೇಂದ್ರಸ್ವಾಮೀಜಿ ಹೇಳಿದರು.

ಮೈಸೂರಿನ ಜೆಎಸ್‌ಎಸ್ ಕಲಾಮಂಟಪದ ವತಿಯಿಂದ ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ರಂಗೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಗೀತ, ನೃತ್ಯ, ನಾಟಕ ಮತ್ತು ಜನಪದ ಕಡೆ ಆಸಕ್ತಿ ವಹಿಸಿದರೆ ಕಲಾವಿದರಾಗಲು ಸಾಧ್ಯವಾಗುತ್ತದೆ.

ಹದೇಶ್ವರ ಮತ್ತು ಮಂಟೇಸ್ವಾಮಿ ಕಥಾಪ್ರಸಂಗವನ್ನು ಕೇಳುವವರು ಇದ್ದರೆ ಇಡೀ ದಿನರಾತ್ರಿ ಹಾಡುತ್ತಾರೆ. ದಕ್ಷಯಜ್ಞ ನಾಟಕ ನೋಡಲು ಖಾಯಂ ವೀಕ್ಷಕರುಗಳಿರುತ್ತಾರೆ. ಮಾಸ್ಟರ್ ಹಿರಣಯ್ಯ ಅವರ ನಾಟಕದಲ್ಲಿ ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸಿ ಯಾರ ಮನಸ್ಸಿಗೆ ನೋವಾಗದಂತೆ ಹಾಸ್ಯದ ಮೂಲಕ ಜನರಿಗೆ ತಿಳಿಸುತ್ತಿದ್ದರು. ನೋವಿಗೆ ಸ್ಪಂದಿಸುವ ಶಕ್ತಿ ಕಲೆಗೆ ಇದೆ. ಸತ್ಯಹರಿಶ್ಚಂದ್ರ ನಾಟಕದಲ್ಲಿ ನಕ್ಷತ್ರಿಕನ ಪಾತ್ರ ಮಾಡಿದ ವ್ಯಕ್ತಿಯನ್ನು ಬೈಯುತ್ತಿದರು. ನಾಟಕದಲ್ಲಿ ಬರುವ ಪಾತ್ರಗಳು ಜನರ ಮನಸ್ಸಿನಲ್ಲಿ ನಾಟುತ್ತವೆ. ತನ್ನ ಮರೆತು ತಾನೇ ಆಗುವ ಸಾಮರ್ಥ್ಯ ಇದೆ. ಅದರಿಂದ ನಾಟಕ ಮನುಷ್ಯನನ್ನು ಸಂಪೂರ್ಣವಾಗಿ ಸೆಳೆದುಕೊಳ್ಳುತ್ತದೆ. ಇದೆ ನಾಟಕದ ಮುಖ್ಯವಾದ ಲಕ್ಷಣ. ಕಲೆಯನ್ನು ಉಳಿಸಬೇಕು ಎಂದು ಹೇಳಿದರು.

ಶಾಸಕ ಎಚ್.ಎಂ. ಗಣೇಶ್‌ಪ್ರಸಾದ್ ಮಾತನಾಡಿ, ಇಂದು ನಾಟಕ ಕಲೆ ಕ್ಷೀಣಿಸುತ್ತಿದೆ ಅದರಿಂದ ನಾಟಕಕ್ಕೆ ನಾವೆಲ್ಲರೂ ಪ್ರೋತ್ಸಾಹ ನೀಡಿ ಉಳಿಸುವ ಮೂಲಕ ಮುಂದಿನ ಜನಾಂಗಕ್ಕೆ ತಲುಪುವಂತೆ ಮಾಡಬೇಕು. ತಂತ್ರಜ್ಞಾನ ಮುಂದುವರೆದಂತೆ ಎಲ್ಲಾ ಬದಲಾಗುತ್ತಿದ್ದು, ಪುಸ್ತಕವನ್ನು ಕೊಂಡು ಓದಿದಷ್ಟು ಸಂತೋಷ ಮತ್ತು ಏಕ್ರಾಗತೆ ಮೊಬೈಲ್‌ನಿಂದ ಸಿಗುವುದಿಲ್ಲ. ಜೆಎಸ್‌ಎಸ್ ಸಂಸ್ಥೆ 1948ರಲ್ಲಿ ಜೆಎಸ್‌ಎಸ್ ಕಲಾಮಂಟಪವನ್ನು ಸ್ಥಾಪಿಸಿ ನಾಟಕ ಕಲೆಯನ್ನು ಉಳಿಸಿ ಬೆಳಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಶಾಸಕ ಸಿ.ಎಸ್. ನಿರಂಜನಕುಮಾರ್ ಮಾತನಾಡಿ, ಸತತ ಅಭ್ಯಾಸ ಮತ್ತು ಆಸಕ್ತಿಯಿಂದ ಕಲೆಯನ್ನು ಕರಗತ ಮಾಡಿಕೊಳ್ಳಬಹುದು. ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಸಂಗೀತ, ನಾಟಕ, ನೃತ್ಯ ಹೀಗೆ ಎಲ್ಲಾ ರಂಗದಲ್ಲೂ ಭಾಗವಹಿಸಬೇಕು. ಜ್ಞಾನ ಓದುವುದರಿಂದ ವೃದ್ಧಿಯಾಗುತ್ತದೆ. ಕಲೆಯಿಂದ ಜ್ಞಾನ ವಿಕಸನವಾಗುತ್ತದೆ. ಪ್ರತಿಭೆಯಿರುವ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿದರೆ ಅವರು ಸಾಧಕರಾಗಲು ಸಾಧ್ಯವಾಗುತ್ತದೆ. ಈ ಕಾರ್ಯವನ್ನು ಜೆಎಸ್‌ಎಸ್ ಕಲಾಮಂಟಪ ಮಾಡಿಕೊಂಡು ಬರುತ್ತಿರುವುದು ಸಂತೋಷವಾಗಿದೆ. ಮೊಬೈಲ್‌ನಿಂದ ನಾಟಕ ಇಂದು ಹಳ್ಳಿಗಳಲ್ಲಿ ಕಾಣದಾಗಿದೆ. ಸಾವಿರಾರು ಜನರು ಸೇರುವ ಜಾತ್ರೆಯಲ್ಲಿ ನಾಟಕ ಇತ್ತು. ಇಂದು ಈ ಸಂಭ್ರಮ ಇಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಸ್ಟ್ರೇಲಿಯದ ಬ್ರಿಸ್ಬೇನ್‌ನ ಆಸ್ಟೆಕ್ ಪ್ರಿಸಿಷನ್ ಇಂಜಿನಿಯರಿಂಗ್ ಪ್ರೈ.ಲಿ. ನಿರ್ದೇಶಕ ಮಹದೇವಪ್ರಸಾದ್ ಚೌಡಹಳ್ಳಿ ಅವರು ಶಂಭು ಹಕ್ಕಿ ಅವರ ವಚನಾಮೃತ ಧ್ವನಿಸುರುಳಿ ಬಿಡುಗಡೆ ಮಾಡಿ, ಗಾಂಧೀಜಿಯವರಿಗೆ ಸತ್ಯಹರಿಶ್ಚಂದ್ರ ನಾಟಕದಿಂದ ಪ್ರೇರಣೆಯಾಗಿ ಕಳ್ಳತನ ಮಾಡುವುದಿಲ್ಲ ಎಂದು ಪರಿವರ್ತನೆಯಾಗಿ ರಾಷ್ಟ್ರಪಿತರಾದರು ಹಾಗೂ ಸಂಗೀತ ಮನಸ್ಸನ್ನು ನಿಯಂತ್ರಿಸಿ ಆಧ್ಯಾತ್ಮಿಕತೆ ಕಡೆ ಭಕ್ತಿ ಪರವಶರಾಗಿ ಮಾಡುತ್ತದೆ. ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಸಮಾಜಕ್ಕೆ ಶಿಕ್ಷಣ ನೀಡುವುದರ ಜತೆಗೆ 1948ರಲ್ಲಿ ಸ್ಥಾಪಿಸಿದ ಜೆಎಸ್‌ಎಸ್ ಕಲಾಮಂಟಪದ ಮೂಲಕ ಜನರಿಗೆ ಆಧ್ಯಾತ್ಮಿಕ ಜೀವನ ಸಂದೇಶಗಳನ್ನು ತಲುಪಿಸುತ್ತಿದೆ ಎಂದು ತಿಳಿಸಿದರು.

ಚೀನಾದ ಗುವಾಂಜ್ಹುನ ಭಾರತದ ಕಾನ್ಸಲ್ ಜನರಲ್ ಶಂಭು ಹಕ್ಕಿ, ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ.ಮಹದೇವಮ್ಮ, ರಂಗೋತ್ಸವ ಸಂಚಾಲಕ ಚಂದ್ರಶೇಖರಾಚಾರ್, ಮಹಿಳಾ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ಮಲ್ಲಪ್ಪ, ಸಹಾಯಕ ಪ್ರಾಧ್ಯಾಪಕ ಸಿದ್ದಮಲ್ಲಿಕಾರ್ಜುನಸ್ವಾಮಿ, ಸಾಂಸ್ಕೃತಿಕ ವೇದಿಕೆಗಳ ಸಂಚಾಲಕಿ ಡಾ.ಪಂಕಜ ಹಾಗೂ ವಿದ್ಯಾರ್ಥಿಗಳು ಇದ್ದರು.

ಕಾರ್ಯಕ್ರಮದ ನಂತರ ಜೀವನ್ ಕುಮಾರ್ ಬಿ. ಹೆಗ್ಗೋಡು ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಭಾಸ ಕವಿ ಅವರ ರಚನೆಯ ಮಧ್ಯಮ ವ್ಯಾಯೋಗ ನಾಟಕವನ್ನು ಅಭಿನಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net