ಇನ್ನೆರಡು ದಿನಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಬೊಮ್ಮಾಯಿ ಭೇಟಿ?; ಗರಿಗೆದರಿದ ರಾಜಕೀಯ ಚಟುವಟಿಕೆ

F
Published on

ಬೆಂಗಳೂರು: ನಿನ್ನೆ ಕಲಬುರಗಿಯ ಕಾಂಗ್ರೆಸ್​ ಮುಖಂಡರನೇಕರು ಲೋಕಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ.

ಕಲಬುರಗಿ ಪಾಲಿಕೆಯಲ್ಲಿ ಮೇಯರ್ ಸ್ಥಾನಕ್ಕಾಗಿ ಜೆಡಿಎಸ್​ ಜತೆ ಕೈಜೋಡಿಸುವ ಕುರಿತು ಮಾತುಕತೆ ನಡೆಸಬೇಕು ಎಂದು ಅಲ್ಲಿನ ನಗರಸಭೆಯ ಹತ್ತಕ್ಕೂ ಅಧಿಕ ಸದಸ್ಯರು ನಿನ್ನೆ ಖರ್ಗೆಯವರನ್ನು ಭೇಟಿ ಆಗಿದ್ದರು. ಇದರ ಬೆನ್ನಿಗೇ ಕಲಬುರಗಿ ಪಾಲಿಕೆಯ ಅಧಿಕಾರ ಹಿಡಿಯುವ ಸಲುವಾಗಿ ಬಿಜೆಪಿಯಲ್ಲೂ ಚುರುಕಿನ ಚಟುವಟಿಕೆ ನಡೆದಿದೆ.

ಇಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರನ್ನು ಸಚಿವ ಆರ್. ಅಶೋಕ್​ ಭೇಟಿ ಮಾಡಿದ್ದು, ಸುದೀರ್ಘವಾಗಿ ಚರ್ಚಿಸಿದ್ದಾರೆ. ಸಚಿವ ಆರ್.ಅಶೋಕ್ ಇಂದು ನನ್ನ ತೋಟದ ಮನೆಯಲ್ಲಿ ಭೇಟಿಯಾಗಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಕಲಾಪದ ಬಗ್ಗೆಯೂ ಅವರು ಸಮಾಲೋಚಿಸಿದರು. ಸೋಮವಾರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಅಲ್ಲಿ, ನಮ್ಮ ಶಾಸಕರ ಜತೆ ಎಲ್ಲ ಬೆಳವಣೆಗಗಳ ಬಗ್ಗೆ ಚರ್ಚಿಸಿದ ನಂತರ ಪಕ್ಷದ ಅಭಿಪ್ರಾಯವನ್ನು ತಿಳಿಸಲಾಗುವುದು ಎಂದು ಅವರಿಗೆ ಹೇಳಿದ್ದೇನೆ ಎಂಬುದಾಗಿ ಈ ಭೇಟಿ ಬಳಿಕ ಕುಮಾರಸ್ವಾಮಿ ತಿಳಿಸಿದ್ದಾರೆ.

ಮತ್ತೊಂದೆಡೆ ಸೋಮವಾರ ಅಥವಾ ಮಂಗಳವಾರ ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಿಎಂ ಬೊಮ್ಮಾಯಿ ಭೇಟಿಯಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವೇ ಈ ಭೇಟಿಯ ಪ್ರಮುಖ ಅಜೆಂಡಾ ಎನ್ನಲಾಗಿದೆ. ಸೋಮವಾರ ಸಂಜೆ 4 ಗಂಟೆಗೆ‌ ಪಕ್ಷದ ಮುಖಂಡರ ಜತೆ ಸಭೆ ನಡೆಸಲಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ಆ ಬಳಿಕ ಅಥವಾ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ‌ ಜತೆ ಚರ್ಚಿಸುವ ಸಾಧ್ಯತೆ ನಿಚ್ಚಳವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net