ದೇವದುರ್ಗ: ತಾಲೂಕಿನ ಹೊಸೂರು ಸಿದ್ದಾಪುರ ಗ್ರಾಪಂ ಅರಕೇರಾ ತಾಲೂಕಿನಿಂದ ಕೈಬಿಟ್ಟು ದೇವದುರ್ಗದಲ್ಲೇ ಮುಂದುವರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ಹೋರಾಟ ಸಮಿತಿ ಮುಖಂಡರು ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಅರಕೇರಾ ತಾಲೂಕಿನಿಂದ ಕೈಬಿಡಲು ನಿರ್ಣಯ
ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಮಂಡಲಗುಡ್ಡ ಮಾತನಾಡಿ, ದೇವದುರ್ಗ ತಾಲೂಕಿನಲ್ಲಿ ನಮ್ಮ ಗ್ರಾಪಂ ಉಳಿಸಲು ಗ್ರಾಮಸ್ಥರು ಸಭೆ ಸೇರಿ ನಿರ್ಣಯ ಕೈಗೊಂಡಿದ್ದೇವೆ. ಗ್ರಾಪಂನಲ್ಲಿ ಠರಾವು ಪಾಸ್ ಮಾಡಲಾಗಿದೆ. ತಳಹಂತದಲ್ಲಿ ಕಾನೂನು ಪ್ರಕಾರ ಕ್ರಮಕೈಗೊಂಡಿದ್ದು, ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಗ್ರಾಮದಿಂದ ಜಾಲಹಳ್ಳಿ ನಾಡಕಚೇರಿವರೆಗೆ ಪಾದಯಾತ್ರೆ ನಡೆಸಲಾಗಿದೆ.
ಹೊಸೂರು ಸಿದ್ದಾಪುರ ಗ್ರಾಪಂ ಅರಕೇರಾಗೆ ಸೇರಿಸುವುದರಿಂದ ಜನರ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಅರಕೇರಾ ಯಾವುದೇ ಸೌಲಭ್ಯ ಹೊಂದಿಲ್ಲ. ಕಂದಾಯ ಕೆಲಸಕ್ಕೆ ಸಿರವಾರ, ಕೋರ್ಟ್ ಕೆಲಸಕ್ಕೆ ಮಾನ್ವಿಗೆ ಅಲೆಯುವ ಸ್ಥಿತಿ ಎದುರಾಗಲಿದೆ.
ಯಾವುದೇ ಸೌಲಭ್ಯ ನೀಡದೆ ಏಕಾಏಕಿ ಹೊಸ ತಾಲೂಕು ಘೋಷಣೆ ಮಾಡಿ ಜನರನ್ನು ಗೊಂದಲಕ್ಕೆ ಸಿಲುಕಿಸಲಾಗಿದೆ.ಪರಿಶೀಲಿಸಿ ಹೊಸೂರು ಸಿದ್ದಾಪುರ ಗ್ರಾಪಂ ಅನ್ನು ದೇವದುರ್ಗ ತಾಲೂಕಿನಲ್ಲೇ ಉಳಿಸಬೇಕು. ನಿರ್ಲಕ್ಷ್ಯ ಮಾಡಿದರೆ ಮುಂಬರುವ ತಾಪಂ, ಜಿಪಂ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.
ಮುಖಂಡರಾದ ಶಿವರಾಜ ನಾಯಕ, ಹನುಮಯ್ಯ ಪರ್ಸಿ, ತಿಮ್ಮಣ್ಣ ಮುರಾಳ, ಶಿವಪ್ಪ ಜಲ್ಲಿ, ರಂಗಪ್ಪ ಮುರಾಳ, ಪಂಪಣ್ಣ, ಶಿವರಾಜ, ಸಣ್ಣರಂಗಪ್ಪ ಕಾವಲಿ, ಸೋಮಣ್ಣ, ಮಲ್ಲೇಶ್, ರವಿಕುಮಾರ ನಾಯಕ ಇದ್ದರು.