

ದೇವದುರ್ಗ: ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಕೋನದಿಂದ ಮಾತೋಶ್ರೀ ಹೇಮಾವತಿ ವಿ.ಹೆಗ್ಗಡೆ ಅವರು ಮಹಿಳಾ ಜ್ಞಾನವಿಕಾಸ ಯೋಜನೆಯನ್ನು ಅನುಷ್ಠಾನ ಮಾಡಿದರು. ಅದು ಈಗ ನೊಂದವರ, ದುರ್ಬಲ ವರ್ಗದ ಮಹಿಳೆಯರ ಕಣ್ಣೀರು ಒರಿಸುವ ಯೋಜನೆಯಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ವೇಣುಗೋಪಾಲ ಹೇಳಿದರು.
ತಾಲೂಕಿನ ಹಿರೇಬೂದೂರು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಆಯೋಜಿಸಿದ್ದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಮಹಿಳೆಯರಲ್ಲಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ವೈಯಕ್ತಿಕ ಶುಚಿತ್ವ, ವ್ಯಾವಹಾರಿಕ ಜ್ಞಾನ, ಸ್ವಯಂ ಉದ್ಯೋಗ, ಇನ್ನಿತರ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಈ ಯೋಜನೆ ಹುಟ್ಟಿಕೊಂಡಿದೆ. ರಾಜ್ಯದಲ್ಲಿ ಜ್ಞಾನದೀಪ ಕಾರ್ಯಕ್ರಮದಡಿ 1070 ಶಿಕ್ಷಕರನ್ನು ವಿವಿಧ ಸರಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕಿನಲ್ಲಿ 20 ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ಸಮುದಾಯ ಅಭಿವೃದ್ಧಿ, ಸುಜ್ಞಾನನಿಧಿ ಶಿಷ್ಯವೇತನ, ನಿರ್ಗತಿಕರ ಮಾಸಾಶನ, ಜನಮಂಗಲ, ಕೆರೆ ಅಭಿವೃದ್ಧಿ, ತರಬೇತಿಯಂಥ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: 25 ಜ್ಞಾನವಿಕಾಸ ಕೇಂದ್ರ ಕಾರ್ಯನಿರ್ವಹಣೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ 43 ವರ್ಷಗಳಿಂದ ರಾಜ್ಯದ ಎಲ್ಲ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಗತ್ಯವಿರುವ ಶಾಲೆಗಳಿಗೆ ಬೆಂಚ್, ಡೆಸ್ಕ್, ಶಾಲಾ ಕಟ್ಟಡ, ಕೌಂಪೌಂಡ್ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ, ಮದ್ಯವರ್ಜನ ಶಿಬಿರ ಸೇರಿದಂತೆ ನೂರಾರು ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ನಡೆಯುತ್ತಿವೆ ಎಂದರು.
ಅರಕೇರಾ ಸಮುದಾಯ ಆರೋಗ್ಯ ಕೇಂದ್ರದ ಆಪ್ತಸಮಾಲೋಚಕ ಚಿರಂಜೀವಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಬಸವರಾಜ ಬ್ಯಾಗವಾಟ, ಮಹಿಳಾ ಒಕ್ಕೂಟದ ಅಧ್ಯಕ್ಷೆ ರೇಣುಕಾ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಅಶ್ವಿನಿ ಪ್ರಕಾಶ, ವಲಯ ಮೇಲ್ವಿಚಾರಕ ರಾಮು, ಹಿರೇಬೂದೂರು ಶಾಲೆ ಮುಖ್ಯಶಿಕ್ಷಕ ಅಮರೇಶ, ಮಂಜುನಾಥ ಇದ್ದರು.