

ತರೀಕೆರೆ: ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ರಾಜ್ಯಾದ್ಯಂತ ಜ್ಞಾನವಿಕಾಸ ಕೇಂದ್ರ ಆರಂಭಿಸಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕೆ.ಕುಸುಮಾಧರ್ ಹೇಳಿದರು.
ತಾಲೂಕು ಕಚೇರಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಏರ್ಪಡಿಸಿದ್ದ ಜ್ಞಾನವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಾದ್ಯಂತ 25 ಜ್ಞಾನವಿಕಾಸ ಕೇಂದ್ರಗಳು ಸಕ್ರಿಯವಾಗಿವೆ. ಪ್ರತಿ ತಿಂಗಳೂ ಮಹಿಳೆಯರಿಗಾಗಿ ಆಯೋಜಿಸುವ ಕಾರ್ಯಕ್ರಮದಲ್ಲಿ ಮಹಿಳೆಯರ ಸಬಲೀಕರಣ, ಕೌಟುಂಬಿಕ ಸಾಮರಸ್ಯ, ವೈಯಕ್ತಿಕ ಸ್ವಚ್ಛತೆ, ಕೌಶಲ, ಅಭಿವೃದ್ಧಿ ಕುರಿತಾದ ಮಾಹಿತಿ ನೀಡಲಾಗುತ್ತಿದೆ ಎಂದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸದಸ್ಯತ್ವ ಪಡೆದಿರುವ ಮಹಿಳೆಯರು ಯೋಜನೆ ಮೂಲಕ ಆರ್ಥಿಕ ಸ್ಥಿತಿ ಉತ್ತಮಗೊಳಿಸಿಕೊಳ್ಳುತ್ತಿದ್ದು, ಎಲ್ಲ ಕಾರ್ಯಕ್ರಮದ ಉದ್ದೇಶ ಸಾಕಾರವಾಗಬೇಕು ಎಂದು ಹೇಳಿದರು. ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಜ್ಞಾನವಿಕಾಸ ಕಾರ್ಯಕ್ರಮದ ಯೋಜನಾಧಿಕಾರಿ ರತ್ನಾ ಮೈಪಾಳ, ತಾಲೂಕು ಸಮನ್ವಯಾಧಿಕಾರಿ ಸವಿತಾ ಇತರರಿದ್ದರು.