

ಕುಂಬಳೆ: ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಕ್ತರು ದೇವರಿಗೆ ಸಲ್ಲಿಸುವ ಸೇವೆಗಳ ಶುಲ್ಕ ಹೆಚ್ಚಿಸಲು ಮಲಬಾರ್ ದೇವಸ್ವಂ ಮಂಡಳಿ ಮುಂದಾಗಿದೆ. 2025 ಜ.1ರಿಂದ ಸೇವಾ ಶುಲ್ಕ ಹೆಚ್ಚಳ ಚಾಲ್ತಿಗೆ ಬರಲಿದೆ ಎಂದು ಸೂಚಿಸಲಾಗಿದ್ದು, ಆಕ್ಷೇಪಗಳಿದ್ದಲ್ಲಿ ಡಿ.10ರ ಮುಂಚಿತ ದೇವಸ್ವಂಗೆ ತಿಳಿಸಬೇಕೆಂದು ಉಲ್ಲೇಖಿಸಿ ಸಾರ್ವಜನಿಕ ಮಾಹಿತಿಗೆ ಸೂಚನಾ ಫಲಕ ಹಾಕಲಾಗಿದೆ. ಇದನ್ನು ಗಮನಿಸಿದ ಭಕ್ತರು ದೇವಸ್ವಂ ಉದ್ದೇಶವನ್ನು ವಿರೋಧಿಸಿ, ಸೇವಾ ಶುಲ್ಕ ಹೆಚ್ಚಳ ಪ್ರಸ್ತಾವನೆ ಕೈಬಿಡಲು ಮನವಿ ಸಲ್ಲಿಸಿದ್ದಾರೆ.
ಊರ, ಪರವೂರ ಭಕ್ತರು ಲಕ್ಷಾಂತರ ರೂ.ವ್ಯಯಿಸಿ 35ವರ್ಷಗಳ ಬಳಿಕ ಕಣಿಪುರ ದೇವಳವನ್ನು ಜೀರ್ಣೋದ್ಧಾರ ಗೊಳಿಸಿದ್ದು, ನವೀಕರಿಸಿದ ಕಾಮಗಾರಿಗಳ ಶುಚಿತ್ವ, ಶುಭ್ರತೆ ಕಾಪಾಡುವ ಬದಲು ದೇವಳದ ಸೇವಾ ಶುಲ್ಕ ಹೆಚ್ಚಿಸಲು ಹೊರಟ ದೇವಸ್ವಂ ಮಂಡಳಿ ಹುನ್ನಾರ ಖಂಡನೀಯ ಮತ್ತು ಸೇವಾಶುಲ್ಕ ಹೆಚ್ಚಳ ನಿರ್ಧಾರ ಹಿಂತೆಗೆಯಬೇಕೆಂದು ಬ್ರಹ್ಮಕಲಶ ಸಮಿತಿ ಸಹಿತ ಭಕ್ತರು ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾದ ಸಾರ್ವಜನಿಕ ಭಕ್ತರ ಆಕ್ಷೇಪದ ಮನವಿಯನ್ನು ದೇವಸ್ವಂ ಮತ್ತು ದೇವಸ್ವಂ ಸಚಿವರಿಗೂ ಕಳುಹಿಸಲಾಗಿದೆ. ದೇವಳದ ಕಾರ್ಯನಿರ್ವಹಣಾಧಿಕಾರಿಗೂ ಸಮರ್ಪಿಸಲಾಯಿತು.
ನಿಯೋಗದಲ್ಲಿ ಬಿ.ರಘುನಾಥ ಪೈ, ಮಡ್ವ ಮಂಜುನಾಥ ಆಳ್ವ, ಲಕ್ಷ್ಮಣ ಪ್ರಭು ಕುಂಬ್ಳೆ, ಶಂಕರ ಆಳ್ವ ಕೋಟೆಕಾರು, ವಿಕ್ರಂ ಪೈ, ಸುಧಾಕರ ಕಾಮತ್ ಮೊದಲಾದವರಿದ್ದರು.