ದೇವದುರ್ಗ-ಪುಣೆ ಬಸ್ ಬಂದ್ !

21-DVD-1
ದೇವದುರ್ಗದ ಸಾರಿಗೆ ಸಂಸ್ಥೆಯ ಬಸ್ ಡಿಪೋದ ಹೊರನೋಟ.
Published on

ದೇವದುರ್ಗ: ಹಲವು ವರ್ಷಗಳಿಂದ ಸಂಚರಿಸುತ್ತಿದ್ದ ದೇವದುರ್ಗ-ಪುಣೆ ಬಸ್ ಸಂಚಾರ ಬಂದ್ ಮಾಡಿದ್ದರಿಂದ ಕೂಲಿಕಾರ್ಮಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಪುಣೆಗೆ ಹೋಗಲು ಹಾಗೂ ಅಲ್ಲಿಂದ ಬರಲು ಮೂರ‌್ನಾಲ್ಕು ಕಡೆ ಬಸ್ ಏರಿ ಇಳಿಯಬೇಕಿದೆ. ಇದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ತೊಂದರೆ ಅನುಭವಿಸುವಂತಾಗಿದೆ.

ತಾಲೂಕು ಅತಿಹೆಚ್ಚು ದೊಡ್ಡಿ, ತಾಂಡಾ, ಹಿಂದುಳಿದ ಹಳ್ಳಿಗಳನ್ನು ಒಳಗೊಂಡಿದೆ. ಪುಣೆಗೆ ಮೊದಲಿನಿಂದಲೂ ತಾಂಡಾ, ದೊಡ್ಡಿಯ ಲಂಬಾಣಿ ಸಮಾಜದ ಅತಿಹೆಚ್ಚು ಜನರು ಗುಳೆ ಹೋಗುತ್ತಿದ್ದಾರೆ. ಕೆಲವರು ಬೆಂಗಳೂರು ನೆಚ್ಚಿಕೊಂಡಿದ್ದಾರೆ.

ದೇವದುರ್ಗ, ಲಿಂಗಸುಗೂರು, ಸುರಪುರ ಭಾಗದಲ್ಲಿ ಅತಿಹೆಚ್ಚು ಲಂಬಾಣಿ ಜನಸಂಖ್ಯೆಯಿದ್ದು, ಪುಣೆಗೆ ಗುಳೆ ಹೋಗುತ್ತಾರೆ. ಇವರ ಅನುಕೂಲಕ್ಕಾಗಿ ಹಲವು ವರ್ಷಗಳ ಹಿಂದೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭಿಸಿತ್ತು. ಲಿಂಗಸುಗೂರು ಡಿಪೋದ ಬಸ್ ಹಟ್ಟಿ, ದೇವದುರ್ಗ ಮಾರ್ಗವಾಗಿ ಸಂಜೆ 4ಕ್ಕೆ ತೆರಳಿದರೆ, ದೇವದುರ್ಗ-ಪುಣೆ ಬಸ್ 5.30ಕ್ಕೆ ಬಿಡುತ್ತಿತ್ತು. ಇದು ಸುತ್ತಲಿನ ಐದಾರು ತಾಲೂಕಿನ ಜನರಿಗೆ ಅನುಕೂಲವಾಗಿತ್ತು.

ಕೂಲಿಕಾರರು ಕುಟುಂಬ ಸಮೇತ ಗುಳೆ ಹೋಗುತ್ತಿದ್ದರು. ಒಂದೇ ಮಾರ್ಗದ ಬಸ್‌ನಲ್ಲಿ ಪುಣೆಗೆ ಹೋಗಲು ಅನುಕೂಲವಾಗಿತ್ತು. ಲಿಂಗಸುಗೂರು ಡಿಪೋದ ಬಸ್ ಹಲವು ವರ್ಷಗಳ ಹಿಂದೆಯೇ ಬಂದ್ ಆಗಿದೆ. ದೇವದುರ್ಗ-ಪುಣೆ ಬಸ್ ಮಾತ್ರ ಆಸರೆಯಾಗಿತ್ತು. 6ತಿಂಗಳಿಂದ ಈ ಮಾರ್ಗದ ಬಸ್ ಸಂಚಾರವೂ ಬಂದ್ ಆಗಿದೆ. ಹೀಗಾಗಿ ಜನರು ಕಕ್ಕೆರಾ, ಕೊಡೆಕಲ್, ವಿಜಯಪುರಕ್ಕೆ ತೆರಳಿ ಪುಣೆಗೆ ಹೋಗುವ ಸ್ಥಿತಿಯಿದೆ. ಸಾರಿಗೆ ಸಂಸ್ಥೆ ಪುಣೆ ದೇವದುರ್ಗ ಮಾರ್ಗದ ಬಸ್ ಪುನರಾರಂಭಿಸಲು ಒತ್ತಾಯಿಸಿದ್ದಾರೆ.

ಹಲವು ವರ್ಷಗಳಿಂದ ಪುಣೆಗೆ ತೆರಳುತ್ತಿದ್ದ ಬಸ್ಸನ್ನು ಸಾರಿಗೆ ಸಂಸ್ಥೆ ಆರು ತಿಂಗಳ ಹಿಂದೆ ಸಣ್ಣಪುಟ್ಟ ನೆಪಕ್ಕೆ ಬಂದ್ ಮಾಡಿದೆ. ಕೆಲ ತಿಂಗಳ ಹಿಂದೆ ಮಹಾರಾಷ್ಟ್ರ ಗಡಿ ವಿಚಾರವಾಗಿ ಗಲಾಟೆಯಾದಾಗ ದೇವದುರ್ಗದ ಬಸ್ ಪುಣೆಯಲ್ಲಿ ಸಿಲುಕಿ ದಾಳಿಗೆ ತುತ್ತಾಗಿತ್ತು. ಕಿಡಿಗೇಡಿಗಳು ಬಸ್‌ಗೆ ಮಸಿ ಬಳಿದಿದ್ದರು. ಇದೇ ನೆಪದಲ್ಲಿ ಬಂದ್ ಆದ ಬಸ್ ಇದುವರೆಗೆ ಆರಂಭವಾಗಿಲ್ಲ.

ಸಣ್ಣಪುಟ್ಟ ನೆಪ

ದೇವದುರ್ಗ-ಪುಣೆ ಮಾರ್ಗದ ಬಸ್ ತಾಲೂಕು ಮಾತ್ರವಲ್ಲ ನಾಲ್ಕೈದು ತಾಲೂಕಿನ ಜನರಿಗೆ ಅನುಕೂಲವಾಗಿತ್ತು. ಖಾಸಗಿ ವಾಹನಗಳ ಮಾಲೀಕರ ಒತ್ತಡಕ್ಕೆ ಮಣಿದು ಮಾರ್ಗ ಬಂದ್ ಮಾಡಿದ್ದು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಬಸ್ ಬಿಡಲು ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಕಲೆಕ್ಷನ್ ಆಗಲ್ಲ ಎನ್ನವುದು ಸುಳ್ಳು. ಬಸ್ ಪುನರಾರಂಭಿಸದಿದ್ದರೆ ಡಿಪೋ ಮುಂದೆ ಹೋರಾಟ ನಡೆಸುತ್ತೇವೆ. ನರಸಣ್ಣಗೌಡ ನಾಯಕ ಪಿಎಸ್ಪಿ ತಾಲೂಕು ಅಧ್ಯಕ್ಷ ದೇವದುರ್ಗ-ಪುಣೆ ಮಾರ್ಗದ ಬಸ್ ಕಲೆಕ್ಷನ್ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿರಲಿಲ್ಲ. ಹೋಗುವಾಗ ಜನರಿದ್ದರೆ ವಾಪಸ್ ಖಾಲಿಯಾಗಿ ಬರುತ್ತಿದ್ದರಿಂದ ಈ ಮಾರ್ಗ ನಮಗೆ ಹೊರೆಯಾಗಿತ್ತು. ಹೀಗಾಗಿ ಬಂದ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ರಾಮನಗೌಡ ಬಸ್ ಡಿಪೋ ಮ್ಯಾನೇಜರ್, ದೇವದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net