

ನವಲಗುಂದ: ಬಿತ್ತನೆ ಮಾಡಿದ್ದ ಬೆಳೆಗಳೆಲ್ಲ ಮಳೆಯಿಂದ ಹಾನಿಗೀಡಾಗಿವೆ. ರಾಜ್ಯ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಪಕ್ಷಾತೀತ ರೈತ ಒಕ್ಕೂಟದ ತಾಲೂಕಾಧ್ಯಕ್ಷ ಲೋಕನಾಥ ಹೆಬಸೂರ ಒತ್ತಾಯಿಸಿದರು.
ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತ ಹೋರಾಟಗಾರರು ಗುರುವಾರ ವಾಹನ ಸಂಚಾರ ತಡೆ ನಡೆಸಿ ತಹಸೀಲ್ದಾರ್ ಸುಧೀರ ಸಾಹುಕಾರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿರುವ ಪ್ರಮುಖ ಹಳ್ಳಗಳು ತುಂಬಿ ಪ್ರವಾಹ ಬಂದು ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕೃಷಿ ಪಂಪ್ಸೆಟ್, ಪೈಪ್ಗಳು ಮುಳುಗಡೆಯಾಗಿವೆ. ಮರುಬಿತ್ತನೆ ಮಾಡಲು ಉಚಿತವಾಗಿ ಬೀಜ, ಗೊಬ್ಬರ ವಿತರಿಸಬೇಕು ಎಂದರು.
ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕರ ಅಂಬಲಿ ಮಾತನಾಡಿ, ತಾಲೂಕಿನಲ್ಲಿ ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಸೇರಿದಂತೆ 56 ಹಳ್ಳಗಳ ಪ್ರವಾಹದಿಂದ ಬೆಳೆ ಹಾನಿಯಾಗಿದೆ. ಜಿಲ್ಲಾಡಳಿತ ತುರ್ತಸಭೆ ನಡೆಸಿ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡಬೇಕು ಎಂದರು.
ರೈತ ದೇವೇಂದ್ರಪ್ಪ ಹಳ್ಳದ ಮಾತನಾಡಿ, ಕಳೆದ ವರ್ಷ ಬೆಳೆ ವಿಮೆಯಲ್ಲಿ ತಾರತಮ್ಯವಾಗಿದ್ದು, ಅದನ್ನು ಸರಿಪಡಿಸಿ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರಘುನಾಥ ನಡುವಿನಮನಿ, ಬರಮಪ್ಪ ಕಾತರಗಿ, ಬಸವರಾಜ ಓಲೆಕಾರ, ಗೌಡಪ್ಪಗೌಡ ದೊಡ್ಡಮನಿ, ಮಹಾಲಿಂಗಪ್ಪ ವೀರೇಶನವರ, ದೇವೇಂದ್ರ ಗುಡಿಸಾಗರ, ನಿಂಗಪ್ಪ ಬಡಿಗೇರ, ಪ್ರವೀಣ ಯರಗಟ್ಟಿ, ನಿಂಗಪ್ಪ ನ್ಯಾವಳ್ಳಿ, ಶಿವಾನಂದ ಚಿಕ್ಕನರಗುಂದ, ಸಿದ್ದಲಿಂಗಪ್ಪ ಮಾಳನವರ, ಮಲ್ಲಪ್ಪ ಕೌವಲಗೇರಿ, ಬಿ.ಎಂ. ಹಣಸಿ, ಉಮೇಶ ಸೋಮಾಪೂರ, ಪತ್ರಯ್ಯ ಮಠಪತಿ, ಇತರರಿದ್ದರು.