ಪ್ರತಿಪಕ್ಷಗಳಿಂದಾಗದ ಕೆಲಸ ಪತ್ರಿಕೆಗಳಿಂದ ಸಾಧ್ಯ; ಶಾಸಕಿ ಕರೆಮ್ಮ ಜಿ.ನಾಯಕ ಅಭಿಮತ

Devadurga press day
ದೇವದುರ್ಗದಲ್ಲಿ ಪತ್ರಕರ್ತರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭವನ್ನು ಶಾಸಕಿ ಕರೆಮ್ಮ ಜಿ.ನಾಯಕ ಮಂಗಳವಾರ ಉದ್ಘಾಟಿಸಿದರು. ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ, ತಾಪಂ ಇಒ ರಾಮರೆಡ್ಡಿ ಪಾಟೀಲ್, ಉದ್ಯಮಿ ಭಾನುಪ್ರಕಾಶ ಖೇಣೇದ್, ಕೃಷಿ ಇಲಾಖೆ ಎಡಿ ಬಸವರಾಜ ಸಿದ್ದಾರೆಡ್ಡಿ ಇತರರಿದ್ದರು.
Published on

ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ

ದೇವದುರ್ಗ: ಸಮಾಜದ ಓರೆಕೋರೆಗಳನ್ನು ತಿದ್ದುವ ಪತ್ರಿಕೆಗಳು ಜನರ ಧ್ವನಿಯಾಗಿವೆ. ಆದರೆ, ಪತ್ರಕರ್ತರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಕರೆಮ್ಮ ಜಿ.ನಾಯಕ ಹೇಳಿದರು.

ಪಟ್ಟಣದ ಖೇಣೇದ್ ಮುರಿಗೆಪ್ಪ ಫಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಸಮಾಜ ಕಟ್ಟುವ ಕೆಲಸದಲ್ಲಿ ದುಡಿಯುತ್ತಿರುವ ಪತ್ರಕರ್ತರಿಗೆ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ.

ತಾಲೂಕು ಹಾಗೂ ಹೋಬಳಿ ಮಟ್ಟದ ಪತ್ರಕರ್ತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಕುರಿತ ಮಾಹಿತಿ ಇದೆ. ಪತ್ರಕರ್ತರಿಗೆ ಸರ್ಕಾರದಿಂದ ವಿಶೇಷ ಯೋಜನೆ ರೂಪಿಸಲು ಒತ್ತಾಯ ಮಾಡುವುದಾಗಿ ತಿಳಿಸಿದರು.

ಪತ್ರಿಕಾರಂಗ ಸಮಾಜದ ಕನ್ನಡಿ ಹಾಗೂ ರಾಜಕಾರಣಿಗಳಿಗೆ ಮಾರ್ಗದರ್ಶಕ ಇದ್ದಂತೆ. ಹೊಗಳಿಗೆ ಹಾಗೂ ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸಬೇಕಿದೆ. ಅನ್ಯಾಯಕ್ಕೆ ಒಳಗಾದವರಿಗೆ ಮಾಧ್ಯಮ ರಂಗದಿಂದ ನ್ಯಾಯಸಿಕ್ಕಿದೆ. ಪ್ರತಿಪಕ್ಷಗಳು ಮಾಡದಂಥ ಕೆಲಸಗಳನ್ನು ಪತ್ರಿಕೆಗಳು ಮಾಡುತ್ತಿರುವುದು ಶ್ಲಾಘನೀಯ. ಪತ್ರಕರ್ತರನ್ನು ಸಮಾಜ ಗೌರವಿಸಬೇಕು ಎಂದು ಶಾಸಕಿ ಕರೆಮ್ಮ ನಾಯಕ ತಿಳಿಸಿದರು.

ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ ಉಪನ್ಯಾಸ ನೀಡಿದರು. ಮಾಧ್ಯಮ ಸಮಾಜದ ನಾಲ್ಕನೇ ಅಂಗವಾಗಿದ್ದು, ಇದನ್ನೂ ಕಸಿಯುವಂಥ ಹುನ್ನಾರಗಳು ಬಂಡವಾಳಶಾಹಿಗಳಿಂದ ಆಗುತ್ತಿದೆ. ದಶಕಗಳಿಂದಲೂ ಮಾಧ್ಯಮ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ. ನೊಂದವರ ಧ್ವನಿಯಾಗಿ, ಅನ್ಯಾಯಕ್ಕೊಳಗಾದವರ ಆಶಾಕಿರಣವಾಗಿ, ಭ್ರಷ್ಟರ ವಿರುದ್ಧ ಸಿಂಹಸ್ವಪ್ನವಾಗಿ ಕೆಲಸ ಮಾಡುತ್ತಿದೆ. ಪತ್ರಕರ್ತರು ಮಾಧ್ಯಮದ ಮೌಲ್ಯಗಳನ್ನು ಯಾವತ್ತೂ ಮರೆಯಬಾರದು ಎಂದರು.

ಎ.ವೆಂಕಟೇಶ ನಾಯಕ ಪ್ರಾಯೋಜಿತ ದುರ್ಗದ ಸಿರಿ ಪ್ರಶಸ್ತಿಯನ್ನು ಪತ್ರಕರ್ತರ ರಂಗನಾಥ ಕೊಂಬಿನ್‌ಗೆ ನೀಡಿ ಸನ್ಮಾನಿಸಲಾಯಿತು.

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಗುರುಸ್ವಾಮಿಯನ್ನು ಸನ್ಮಾನಿಸಲಾಯಿತು. ಸಿಪಿಐ ಖಾಜಾಹುಸೇನ್, ಶರಣಗೌಡ ಕಮತಗಿ, ಅಲ್ಲಾಭಕ್ಷ, ಸಿಡಿಪಿಒ ವೆಂಕಟಪ್ಪ, ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ತಾಲೂಕು ಅಧ್ಯಕ್ಷ ಬಾಬುಅಲಿ ಕರಿಗುಡ್ಡ, ಕಾರ್ಯದರ್ಶಿ ನಾಗರಾಜ ಸುಟ್ಟಿ, ಸೂಗೂರೇಶ ಗುಡಿ, ಅಲಿಬಾಬಾ ಪಟೇಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net