More

    ದಾವಣಗೆರೆಯಲ್ಲಿ ಪತ್ರಿಕಾ ದಿನಾಚರಣೆ- ಜೊಳ್ಳು ಪತ್ರಕರ್ತರ ಕಡಿವಾಣ ಅಗತ್ಯ-ಶಿವಾನಂದ ತಗಡೂರು

    ದಾವಣಗೆರೆ: ಇಂದು ಜೊಳ್ಳು ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ನೈಜ ಪತ್ರಕರ್ತರು ಮನೆ ಸೇರುವ ಆತಂಕದ ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಶಿವಧ್ಯಾನ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಇಂದು ಪತ್ರಕರ್ತರ ವೃತ್ತಿ ಫ್ಯಾಷನ್ ಆಗಿದ್ದು, ರಾಶಿ ಪತ್ರಕರ್ತರು ಹುಟ್ಟಿಕೊಂಡಿದ್ದಾರೆ. ರಾತ್ರಿ ಯೂಟ್ಯೂಬ್ ಚಾನಲ್ ಆರಂಭಿಸಿ, ಮರುದಿನ ನಾನೂ ಪತ್ರಕರ್ತ ಎಂದು ಬರುವವರು ಹೆಚ್ಚಿದ್ದಾರೆ. ಅವರಿಗೆ ಕನಿಷ್ಠ ಜ್ಞಾನವೂ ಇರುವುದಿಲ್ಲ ಎಂದು ವಿಷಾಧಿಸಿದರು.
    ನೈಜ ಪತ್ರಕರ್ತನಿಗೆ ವಿಶ್ವಾಸಾರ್ಹತೆ ಮುಖ್ಯ. ತನ್ನ ಬರವಣಿಗೆ ಹಾಗೂ ಪತ್ರಿಕೆಯ ಮೂಲಕ, ನಿತ್ಯವೂ ಜನರೊಂದಿಗೆ ಒಡನಾಟದ ನಡುವೆ ಅದನ್ನು ಸಂಪಾದಿಸಿಕೊಳ್ಳಬೇಕು. ಸುದ್ದಿ ವಿಚಾರವಾಗಿ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದು ಸಲಹೆ ನೀಡಿದರು.
    ಕಾರ್ಯನಿರತ ಪತ್ರಕರ್ತರ ಸಂಘ 8 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಇದು ಕಾರ್ಯನಿರತರ ವೇದಿಕೆಯಾಗಿದೆ. ಕಾರ್ಯ ಮರೆತವರು ದಯಮಾಡಿ ಸಂಘಟನೆಯಿಂದ ಆಚೆ ಹೋಗಬೇಕು ಎಂದು ಹೇಳಿದರು.
    ಪತ್ರಕರ್ತೆಯರಿಗೆ ಮಾಧ್ಯಮ ರತ್ನ ಗೌರವ ಪ್ರದಾನ ಮಾಡಿ ಮಾತನಾಡಿದ ಬಾಪೂಜಿ ವಿದ್ಯಾಸಂಸ್ಥೆ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್,ಮಾಧ್ಯಮಗಳು ಆತುರದಲ್ಲಿ ಸುದ್ದಿ ನೀಡುವ ಭರದಲ್ಲಿ ಸುಳ್ಳು ವಿದ್ಯಮಾನದ ಬಗ್ಗೆ ನಿಗಾವಹಿಸಬೇಕು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರ ಬಗ್ಗೆಯೂ ಬೆಳಕು ಚೆಲ್ಲಬೇಕು. ಅಭಿವೃದ್ಧಿ ಪರ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
    ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳ ಸತ್ಯ- ಅಸತ್ಯದ ಬಗ್ಗೆ ಅರಿತು ಪ್ರಕಟಿಸಬೇಕು. ಪತ್ರಿಕೆಗಳು ಇಂದಿಗೂ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ಮನೆಗಳಲ್ಲಿ ಮಕ್ಕಳಿಗೆ ಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು ಎಂದರು.
    ಕೈಗಾರಿಕೋದ್ಯಮಿ ಡಾ.ಅಥಣಿ ವೀರಣ್ಣ ಮಾತನಾಡಿ ತಾವು ಪತ್ರಿಕೆ ಹಂಚುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು. ಪತ್ರಿಕಾ ವಿತರಕರಿಗೆ ಸಹಾಯ ಮಾಡುವ ಆಶಯ ವ್ಯಕ್ತಪಡಿಸಿದರು.
    ಅನಾರೋಗ್ಯಕ್ಕೀಡಾದ ಪತ್ರಕರ್ತರಿಗೆ ಸಂಘದ ಕ್ಷೇಮ ನಿಧಿಯಿಂದ ಧನಸಹಾಯ ಮಾಡಿದ ಚೆಕ್ ವಿತರಣೆ ಮಾಡಿದ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ವೈಯಕ್ತಿಕವಾಗಿ 20 ಸಾವಿರ ರೂ. ಧನಸಹಾಯ ಮಾಡುವುದಾಗಿ ಭರವಸೆ ನೀಡಿದರು.
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಕ್ಕೆ ಇದುವರೆಗೂ ಕಚೇರಿ ಇಲ್ಲ. ಪತ್ರಿಕಾಭವನಕ್ಕೆ ದೂಡಾದಿಂದ ನಿವೇಶನ ಮಂಜೂರಾಗಿದೆ ಎಂದರು.
    ಸಾಧಕ ಪತ್ರಕರ್ತರನ್ನು ಗೌರವಿಸಲು ದತ್ತಿ ಪ್ರಶಸ್ತಿ ನೀಡುವ ಉದ್ದೇಶವಿದ್ದು, ಪ್ರತಿಯೊಬ್ಬ ದಾನಿಗಳಿಂದ 5.50 ಲಕ್ಷ ರೂ.ಸಂಗ್ರಹವಾಗಿದ್ದು, ದತ್ತಿ ಹಣದಿಂದ ಠೇವಣಿ ಇಟ್ಟು ಬಡ್ಡಿ ಹಣವನ್ನು ಪ್ರಶಸ್ತಿಗ ಬಳಸಲಾಗುವುದು ಎಂದು ಹೇಳಿದರು.
    ನಾಗರಾಜ ಬಡದಾಳ್, ಎ.ಎಲ್. ತಾರಾನಾಥ್, ವಿವೇಕ್ ಎಲ್. ಬದ್ದಿ, ಬಿ.ಎನ್. ಸಾಯಿಪ್ರಸಾದ್, ಎಂ. ನಾಗರಾಜ್, ಬುಡೇನ್‌ಸಾಬ್, ಎ.ಕೆ. ಶಿವಬಸಪ್ಪ ಅವರಿಗೆ ‘ಮಾಧ್ಯಮ ಮಾಣಿಕ್ಯ’ ಪ್ರಶಸ್ತಿ ವಿತರಿಸಲಾಯಿತು. ವಿವಿಧ ಪ್ರಶಸ್ತಿ ಪುರಸ್ಕೃತರಾದ ಜಿ.ಸಿ. ಲೋಕೇಶ್, ಎನ್.ಡಿ.ಶಾಂತಕುಮಾರ್, ಕೆ. ಚಂದ್ರಣ್ಣ, ಬಿ.ಎನ್. ಮಲ್ಲೇಶ್, ಆರ್.ಜಿ. ಹಳ್ಳಿ ನಾಗರಾಜ್, ಚಂದ್ರಹಾಸ ಹಿರೇಮಳಲಿ ಎಲ್. ಮಂಜುನಾಥ, ಡಿ.ಎನ್. ಶಾಂಭವಿ ನಾಗರಾಜ್ ಅವರಿಗೆ ‘ಮಾಧ್ಯಮ ಚೂಡಾಮಣಿ’ ಬಿರುದಿನೊಂದಿಗೆ ಸನ್ಮಾನಿಸಲಾಯಿತು.
    ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ದೆವರಮನೆ ಶಿವಕುಮಾರ್, ಮಹಾಂತೇಶ ಒಣರೊಟ್ಟಿ, ಎ. ಫಕೃದ್ದೀನ್ ಇದ್ದರು.

    *ಸರ್ಕಾರ ಪಿಂಚಣಿ ನೀಡಲಿ
    ಪತ್ರಕರ್ತರ ಸೇವಾ ಹಿರಿತನ ಗುರುತಿಸಿ, 60 ವರ್ಷಗಳ ನಂತರ ಪಿಂಚಣಿ ನೀಡುವುದು ಸರ್ಕಾರದ ಕರ್ತವ್ಯ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹುಬ್ಬಳ್ಳಿ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಬಸವರಾಜ ರಾಜಋಷಿ ಹೇಳಿದರು.
    ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಂತೆ ಸಮಾಜದಲ್ಲಿ ಜನತೆಗೆ ಸತ್ಯದ ಅರಿವು ಮೂಡಿಸುವ ಮಾಧ್ಯಮ ಕ್ಷೇತ್ರವೂ ಪ್ರಮುಖ ಅಂಗವಾಗಿದೆ. ಸಮಾಜದ ಶ್ರೇಯೋಭಿವೃದ್ಧಿಗೆ ಚಿಂತಿಸುವ ಈ ಕ್ಷೇತ್ರದ ಪಾತ್ರ ಅನನ್ಯವಾದುದು ಎಂದರು.
    ಈಶ್ವರೀಯ ವಿವಿ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಮಾತನಾಡಿ, ಪತ್ರಕರ್ತರು ಸುದ್ದಿಗಳ ಸತ್ಯ-ಅಸತ್ಯತೆ ಪರಾಮರ್ಶಿಸಬೇಕು. ಪತ್ರಿಕೆಗಳಲ್ಲಿ ಅಧ್ಯಾತ್ಮಿಕ ಅಂಕಣದ ಮೂಲಕ ಜನರಿಗೆ ಅಧ್ಯಾತ್ಮದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts