ಅನಿಷ್ಟ ಪದ್ಧತಿ ತೊಲಗಿಸಲು ಶಿಕ್ಷಣವೇ ಮಾರ್ಗ, ಶಾಸಕಿ ಕರೆಮ್ಮ ಜಿ.ನಾಯಕ ಹೇಳಿಕೆ

SCHOOL OPEN
Published on

ದೇವದುರ್ಗ: ಮಕ್ಕಳನ್ನು ಬಾಧಿಸುವ ಬಾಲ ವಿವಾಹ, ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ತೊಲಗಿಸಲು ಸರ್ವರಿಗೂ ಕಡ್ಡಾಯ ಶಿಕ್ಷಣ ನೀಡಬೇಕಿದೆ. ಇದರಿಂದ ಮಾತ್ರ ಇಂತಹ ಅನಿಷ್ಟ ಪದ್ಧತಿ ನಿರ್ಮೂಲನೆ ಸಾಧ್ಯ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.

ತಾಲೂಕಿನ ಗಬ್ಬೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು.

ಈ ವರ್ಷ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತಾಲೂಕು ಉತ್ತಮ ಫಲಿತಾಂಶ ಪಡೆದಿದೆ. ಇದರಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮುಖ್ಯವಾಗಿದೆ.

ನಮ್ಮಲ್ಲಿ ಈಗಲೂ ಸಾಕ್ಷರತೆ ಕೊರತೆಯಿಂದ ಮಕ್ಕಳನ್ನು ಅರ್ಧದಲ್ಲೆ ಶಾಲೆ ಬಿಡಿಸಿ ದುಡಿಯಲು ಕಳಿಸುವ ಹಾಗೂ ಮಹಿಳೆಯರಿಗೆ ಬಾಲ್ಯ ವಿವಾಹ ಮಾಡಿಸುವ ಪದ್ಧತಿಯಿದ್ದು, ಇದನ್ನು ತೊಡೆದು ಹಾಕಬೇಕಿದೆ ಎಂದರು.

ತಾಲೂಕು ಶೈಕ್ಷಣಿಕವಾಗಿ ಪ್ರಗತಿಹೊಂದಿ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರು ಹಾಗೂ ಇಲಾಖೆ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕಿದೆ.

ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ತಡೆಯಲು ಪಾಲಕರು ಸಹಕಾರ ನೀಡಬೇಕು. ಮುಂದಿನ ವರ್ಷ ಇದಕ್ಕಿಂತಲೂ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರು ಶ್ರಮಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ ಮಾತನಾಡಿ, ಇಂದಿನಿಂದ ಶಾಲೆಗಳು ಆರಂಭವಾಗಲಿದ್ದು ಪಾಲಕರು ತಮ್ಮ ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಬೇಕು. ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ತಡೆಯಲು ಶಿಕ್ಷಣದಿಂದ ಸಾಧ್ಯವಿದೆ. ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಹೆಚ್ಚಿನ ಶ್ರಮವಹಿಸಬೇಕು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ನರಸಮ್ಮ ನಾಯಕ, ಪ್ರಭಾರ ಸಿಪಿಐ ಕೆ.ಹೊಸಕೇರಪ್ಪ, ಪಿಡಿಒ ಶಿವಕುಮಾರ, ಮಲ್ಲಿಕಾರ್ಜುನ ಕುಂಬಾರ, ಗೋವಿಂದ ಇತರರಿದ್ದರು.

ಮಕ್ಕಳನ್ನು ದೊಡ್ಡ ವ್ಯಕ್ತಿಯಾಗಿಸುವ ಶಕ್ತಿ ಗುರುವಿಗಿದೆ

ಮಾನ್ವಿ: ಪಾಲಕರು ಮಕ್ಕಳನ್ನು ಶಾಲೆಗೆ ಕಳಹಿಸಿ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಶಾಸಕ ಹಂಪಯ್ಯನಾಯಕ ಹೇಳಿದರು.

ತಾಲೂಕಿನ ನೀರಮಾನ್ವಿ ಸರ್ಕಾರಿ ಆದರ್ಶ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಹಾಲು ವಿತರಿಸಿ ಮಾತನಾಡಿದರು.

ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಿದರೆ ಅವರನ್ನು ದೊಡ್ಡ ವ್ಯಕ್ತಿಗಳನ್ನಾಗಿ ಮಾಡುವ ಶಕ್ತಿ ಗುರುಗಳಿಗಿದೆ. ಈ ನಂಬಿಕೆಯೊಂದಿಗೆ ಶಿಕ್ಷಣಕೊಡಿಸಲು ಮುಂದಾದರೆ ಮುಂದಿನ ಬದುಕು ಸಲೀಸಾಗುತ್ತದೆ ಎಂದರು.

ಆದರ್ಶ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಫಲಿತಾಂಶ ದಾಖಲಾಗುತ್ತಿದೆ. ಇದು ಶಿಕ್ಷಕ ವರ್ಗದ ಶ್ರಮಧ ಫಲ. ಶಿಕ್ಷಣ ಕ್ಷೇತ್ರಕ್ಕೆ ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು, ಮುಂದೆಯೂ ಸಹಕಾರ ನೀಡುವುದಾಗಿ ಹೇಳಿದರು.

ಡಿಡಿಪಿಐ ವೃಷಭೇಂದ್ರಯ್ಯಸ್ವಾಮಿ, ಬಿಇಒ ಚಂದ್ರಶೇಖರ ದೊಡ್ಡಮನಿ, ಮುಖ್ಯಶಿಕ್ಷಕ ದೇವಯ್ಯ ಹಿರೇಮಠ, ಸಂಜೀವ್ ಸುಧಾಕರ, ಶ್ರೀಕಾಂತ ಬಾಗೋಡಿ, ರಂಜಿತ್‌ಕುಮಾರ್, ಮುಖಂಡರಾದ ಚನ್ನಬಸಪ್ಪ ಬೆಟ್ಟದೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net