

ರಟ್ಟಿಹಳ್ಳಿ: ಶಿಕಾರಿಪುರ ತಾಲೂಕಿನ ಏತ ನೀರಾವರಿ ಯೋಜನೆ ವಿರೋಧಿಸಿ ಪಟ್ಟಣದಲ್ಲಿ ಕಳೆದ 13 ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ರೈತರಿಗೆ ಸರ್ಕಾರದಿಂದ ಸ್ಪಂದನೆ ವ್ಯಕ್ತವಾಗಿಲ್ಲ. ಇತ್ತ ನಿರಶನದಲ್ಲಿ ಪಾಲ್ಗೊಂಡಿರುವ ಹಿರಿಯ ವಕೀಲ ಬಿ.ಡಿ. ಹಿರೇಮಠ ಅವರ ಆರೋಗ್ಯ ದಿನೇ ದಿನೆ ಬಿಗಡಾಯಿಸುತ್ತಿದೆ.
ರೈತರ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು, ಪರ್ಯಾಯ ವ್ಯವಸ್ಥೆಯ ಮೂಲಕ ಪೈಪ್ಲೈನ್ ಅಳವಡಿಸಬೇಕು, ಈಗಾಗಲೇ ತುಂಗಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿ ನ. 30ರಿಂದ ಪಟ್ಟಣದ ಭಗತ್ಸಿಂಗ್ ವೃತ್ತದಲ್ಲಿ ನಿರಶನ ಹಮ್ಮಿಕೊಳ್ಳಲಾಗಿದೆ. ಡಿ. 3ರಿಂದ ಬಿ.ಡಿ. ಹಿರೇಮಠ ಅವರು ನಿರಶನದಲ್ಲಿ ಪಾಲ್ಗೊಂಡಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಕೃಷಿ ಸಚಿವ ಬಿ.ಸಿ. ಪಾಟೀಲ, ಯು.ಬಿ. ಬಣಕಾರ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಆಗಮಿಸಿ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದ್ದಾರೆ. ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಲು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಆದರೆ, ಸರ್ಕಾರದಿಂದ ಯಾವುದೇ ಅಧಿಕೃತವಾಗಿ ಪರಿಹಾರ ಭರವಸೆ ಕಾಣದಿರುವುದು ರೈತರ ಹೋರಾಟದ ಕಾವು ದಿನೇ ದಿನೆ ತೀವ್ರವಾಗುತ್ತಿದೆ.
64 ವರ್ಷದ ಬಿ.ಡಿ. ಹಿರೇಮಠ ಅವರು ನಿತ್ಯ ಕೇವಲ ನೀರು ಸೇವಿಸುತ್ತಿದ್ದಾರೆ. ನಿತ್ಯವೂ ವೈದ್ಯರು ಹಿರೇಮಠರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಆಹಾರ ಸೇವಿಸದಿರುವುದರಿಂದ ನೀರಿನಾಂಶ ಮತ್ತು ಪೋಷಕಾಂಶಗಳ ಪ್ರಮಾಣ ಇಳಿಕೆಯಾಗುತ್ತಿದೆ. ಈಗಾಗಲೇ ತೂಕದಲ್ಲಿ 7-8 ಕೆ.ಜಿ. ವ್ಯತ್ಯಾಸ ಕಂಡುಬಂದಿದೆ ಎನ್ನಲಾಗುತ್ತಿದೆ.
‘ಪ್ರತಿದಿನ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಲಾಗುತ್ತಿದ್ದು, ಅವರಿಗೆ ತುರ್ತು ಚಿಕಿತ್ಸೆ ಮತ್ತು ಆಹಾರದ ಅವಶ್ಯಕತೆ ಇದೆ. ಇಷ್ಟಾದರೂ ಚಿಕಿತ್ಸೆಯನ್ನು ಅವರು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ಸಂಪೂರ್ಣ ವರದಿಯನ್ನು ಜಿಲ್ಲಾ ವೈದ್ಯಾಧಿಕಾರಿಗೆ ನೀಡಲಾಗುತ್ತಿದೆ’ ಎಂದು ತಾಲೂಕು ವೈದ್ಯಾಧಿಕಾರಿ ಜೆಡ್.ಆರ್. ಮಕಂದರ ತಿಳಿಸಿದ್ದಾರೆ.
‘ನೀರಾವರಿ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ, ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳದೆ ರಸ್ತೆಯ ಬದಿ ಅಥವಾ ಪಕ್ಕದ ಗುಡ್ಡದ ಮಾರ್ಗದಲ್ಲಿ ಪೈಪ್ಲೈನ್ ಅಳವಡಿಸಲಿ. ಇದರಿಂದ ಸರ್ಕಾರಕ್ಕೆ ಪರಿಹಾರದ ಹಣ ಉಳಿತಾಯವಾಗುತ್ತದೆ. ತುಂಗಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಹಣ ವಿತರಣೆಯಾಗಲಿ. ತಕ್ಷಣವೇ ನನ್ನ ಹೋರಾಟ ಅಂತ್ಯಗೊಳಿಸುತ್ತೇನೆ. ಸರ್ಕಾರದಿಂದ ಇದಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧ ಆದೇಶ, ದಾಖಲಾತಿ ನೀಡುವವರೆಗೆ ಹೋರಾಟ ನಿಲ್ಲುವುದಿಲ್ಲ. ಜೀವ ಬಿಟ್ಟೇನು, ಹೋರಾಟ ಬಿಡುವುದಿಲ್ಲ ಎನ್ನುತ್ತಾರೆ ಬಿ.ಡಿ. ಹಿರೇಮಠ.
ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ್ದೇನೆ. ಸರ್ಕಾರ ಅವರ ಪ್ರಮುಖ 2 ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬಹುದು. ಆದರೆ, ಇಲ್ಲಿಯವರೆಗೆ ಯಾಕೆ ನಿರ್ಲಕ್ಷ್ಯ ಮಾಡುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಭೂ ಸ್ವಾಧೀನಕ್ಕೆ ಬದಲಿ ವ್ಯವಸ್ಥೆ , ತುಂಗಾ ಮೇಲ್ದಂಡೆ ನೀರಾವರಿ ಯೋಜನೆ ಪರಿಹಾರದ ಹಣ 154 ಕೋಟಿ ರೂ. ನೀಡಬಹುದು. ಬಿ.ಡಿ. ಹಿರೇಮಠ ಆರೋಗ್ಯ ತುಂಬಾ ಹದಗೆಡುತ್ತಿದೆ. | ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕಬ್ಬಿಣ ಕಂತಿಮಠ ರಟ್ಟಿಹಳ್ಳಿ