ಅಂತರವಳ್ಳಿಯಲ್ಲಿ ಹದಗೆಟ್ಟ ರಸ್ತೆ

12hgr1
ಅಂತರವಳ್ಳಿ ಗ್ರಾಮದಿಂದ ಗೊಲ್ಲರದೊಡ್ಡಿ ಮೂಲಕ ಹೊಸಪುರ ತಲುಪುವ ರಸ್ತೆ ಬದಿಯಿಂದ ಕೂಡಿರುವುದು.
Published on

ಹಲಗೂರು: ಸಮೀಪದ ಅಂತರವಳ್ಳಿ ಗ್ರಾಮದಿಂದ ಗೊಲ್ಲರದೊಡ್ಡಿ ಮೂಲಕ ಹೊಸಪುರ ತಲುಪುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ಉತ್ತಮ ರಸ್ತೆ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಮಂಗಳವಾರ ಬೆಳಗ್ಗೆ ರಸ್ತೆಗಿಳಿದ ಈ ಭಾಗದ ಹಲವಾರು ರೈತರು ಕೆಸರು ಗುಂಡಿಗಳಿಗೆ ಭತ್ತದ ಪೈರು ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥ ಡಾ.ನಾಗೇಶ್ ಮಾತನಾಡಿ, ಈ ರಸ್ತೆಗೆ ಹೊಂದಿಕೊಂಡಂತೆ ಸುಮಾರು 700 ಎಕರೆಗೂ ಹೆಚ್ಚು ಕೃಷಿ ಭೂಮಿ ಇದೆ. ಕೃಷಿ ಚಟುವಟಿಕೆಗಳಿಗೆ ನೂರಾರು ರೈತರು ಸುಮಾರು 3 ಕಿ.ಮೀ. ದೂರವಿರುವ ಈ ರಸ್ತೆಯನ್ನು ಬಳಸುತ್ತಾರೆ. ಮಳೆ ಬಿದ್ದರೆ ಸಾಕು, ರಸ್ತೆಯ ತುಂಬ ಗುಂಡಿಯಂತಾಗಿ ರಾಡಿಯು ತುಂಬಿಕೊಳ್ಳುತ್ತದೆ. ಮಳೆಗಾಲದಲ್ಲಿ ಪಾದಚಾರಿಗಳು ನಡೆದಾಡಲು ಸಹ ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಸವಾರರು ಹಿಪ್ಪುನೇರಳೆ ಸೊಪ್ಪು, ಹಸುಗಳಿಗೆ ಮೇವು ತರುವಾಗ ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಉತ್ತಮ ರಸ್ತೆ ನಿರ್ಮಿಸಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.

ನಮ್ಮ ಜಮೀನುಗಳಿಗೆ ಸುಮಾರು ನಲವತ್ತಕ್ಕೂ ಹೆಚ್ಚು ವರ್ಷಗಳಿಂದಲೂ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೇನೆ. ಹಲವಾರು ಬಾರಿ ಮನವಿ ಪತ್ರ ನೀಡಿದರೂ, ಇದುವರೆಗೂ ಒಂದು ರಸ್ತೆ ನಿರ್ಮಿಸುವ ಕಾರ್ಯಕ್ಕೆ ಸರ್ಕಾರ ಗಮನ ಹರಿಸುತ್ತಿಲ್ಲ. ಜನಪ್ರತಿನಿಧಿಗಳು ಕೇವಲ ಚುನಾವಣೆಯಲ್ಲಿ ಬರ್ತಾರೆ, ಭರವಸೆ ನೀಡಿ ಮರೆತು ಬಿಡ್ತಾರೆ. ಮಳೆಯಿಂದಾಗಿ ರಸ್ತೆ ಕೆಸರು ಜಾರುತ್ತಿದ್ದು ಜಮೀನಿಗೆ ಹೋಗಿ ಬರಲು ಸಾಧ್ಯವೇ ಆಗುತ್ತಿಲ್ಲ ಎಂದು ಸೈಕಲ್ ಸವಾರ ಮಹದೇವಪ್ಪ ನೋವು ತೋಡಿಕೊಂಡರು.

ನಾಗೇಶ್, ಮಹದೇವಪ್ಪ, ಸುಂದ್ರಪ್ಪ, ರಮೇಶ್, ರಾಜೇಗೌಡ, ಆನಂದ, ನಾಗರಾಜು, ಜಯರಾಮ, ಸುನೀಲ್, ಮಹೇಶ್, ನಾಗ, ಕಾಂತರಾಜು, ಸ್ವಾಮಿ, ಶಿವ, ರಾಜೇಶ್, ಬಸವರಾಜು, ಯೋಗೇಶ್, ಮಾದಾಚಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net