

ಆಲೂರು: ತಾಲೂಕಿನ ಭರತವಳ್ಳಿ ಗ್ರಾಮದ ಮನೆಯೊಂದರಲ್ಲಿ ಗುರುವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ನಾಶವಾಗಿದೆ.
ಖಯಬ್ ಸಾಬ್ ಕೋಂ ಮಿರ್ಜಾ ಎಂಬುವರ ಮನೆಯಲ್ಲಿ ಬೆಂಕಿ ಅವಘಡ ನಡೆದಿದ್ದು, ಟಿವಿ, ಫ್ರಿಡ್ಜ್, ಉಡುಪುಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಬೆಂಕಿ ಬಿದ್ದ ಸಂದರ್ಭದಲ್ಲಿ ಮನೆ ಯಜಮಾನ ಖಯಬ್ ಸಾಬ್ ಹಾಗೂ ಪತ್ನಿ ಮನೆಯಲ್ಲಿದ್ದರೆಂದು ತಿಳಿದು ಬಂದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರತ್ಯಕ್ಷದರ್ಶಿಗಳು ಹಾಸನದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಹಾಸನದಿಂದ ಸ್ಥಳಕ್ಕೆ ಅಗ್ನಿಶಾಮಕ ವಾಹನ ಬರುವಷ್ಟರೊಳಗೆ ಗ್ರಾಮಸ್ಥರು ಮನೆಯಲ್ಲಿದ್ದ ಸಿಕ್ಕಸಿಕ್ಕ ಪಾತ್ರೆಯಲ್ಲಿ ನೀರು ತಂದು ಬೆಂಕಿ ನಂದಿಸಿದ್ದಾರೆ.
ಮಾಹಿತಿ ತಿಳಿದ ತಹಸೀಲ್ದಾರ್ ಸಿ.ಪಿ.ನಂದಕುಮಾರ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭರತವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.