9 ಖಾಸಗಿ ಶಾಲೆಗಳ ಮಾನ್ಯತೆ ರದ್ದು

FotoJet (5)
Published on

ಡಿಡಿಪಿಐ ಆದೇಶ | ಸುರಕ್ಷತಾ ಕ್ರಮ ಪಾಲಿಸದಿದ್ದಕ್ಕೆ ಕ್ರಮ


ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ
ಶಾಲಾ ಕಟ್ಟಡ, ಅಗ್ನಿ ಸುರಕ್ಷತೆ ಹಾಗೂ ಮಕ್ಕಳ ಸುರಕ್ಷತಾ ಕ್ರಮಗಳನ್ನು ಪಾಲಿಸದ ತಾಲೂಕಿನ 9 ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ರದ್ದುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ. ಬೈಲಾಂಜನಪ್ಪ ಆದೇಶ ಹೊರಡಿಸಿದ್ದಾರೆ.
ಈ ಶಿಕ್ಷಣ ಸಂಸ್ಥೆಗಳು 5 ವರ್ಷಗಳ ಅವಧಿಗೆ ನವೀಕರಣ ಮಾನ್ಯತೆ ಪಡೆದು ವಿದ್ಯಾರ್ಥಿಗಳ ಹಿತವನ್ನು ಕಾಪಾಡದೆ ಕಾರ್ಯನಿರ್ವಹಿಸುತ್ತಿದ್ದವು. ಬಾಗೇಪಲ್ಲಿ ಹಾಗೂ ಚೇಳೂರು ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 43 ಖಾಸಗಿ ಶಾಲೆಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಮಾನ್ಯತೆ ಪಡೆದಿವೆ. ಈ ಪೈಕಿ ಕಟ್ಟಡ ಸುರಕ್ಷತಾ ಹಾಗೂ ಅಗ್ನಿ ಸುರಕ್ಷತಾ ಕ್ರಮಗಳು ಸೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿಯಮ ಪಾಲಿಸದೆ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ 9 ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಿರುವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳ ಮಾಲೀಕರಿಗೆ, ಮುಖ್ಯಶಿಕ್ಷಕರಿಗೆ ನೋಟಿಸ್ ಕೊಟ್ಟು ಕಾನೂನಿನ ಬಿಸಿ ಮುಟ್ಟಿಸಿದ್ದಾರೆ.

ನವೀಕರಣ ಮಾನ್ಯತೆ ರದ್ದು
2020-21ನೇ ಸಾಲಿನಿಂದ 2024-25ನೇ ಸಾಲಿನವರೆಗಿನ ನವೀಕರಣ ಮಾನ್ಯತೆಯನ್ನು ರದ್ದುಗೊಳಿಸಿ, 5 ವರ್ಷಗಳ ಅವಧಿಗೆ ರದ್ದುಪಡಿಸಲಾಗಿರುವ ಮಾನ್ಯತೆಯನ್ನು ನವೀಕರಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಇಲಾಖೆ ಅನ್‌ಲೈನ್ ತಂತ್ರಾಂಶದಲ್ಲಿ ಸಲ್ಲಿಸಿ ಮಾನ್ಯತೆ ನವೀಕರಿಸಿಕೊಳ್ಳುವಂತೆ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗೆ ಉಪನಿರ್ದೇಶಕರ ಕಚೇರಿಯಿಂದ ಎಚ್ಚರಿಕೆ ನೋಟಿಸ್ ನೀಡಲಾಗಿದೆ.

ಮೂರು ಬಾರಿ ನೋಟಿಸ್
ಬಾಗೇಪಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವ್ಯಾಪ್ತಿಯ 9 ಖಾಸಗಿ ಶಾಲೆಗಳಿಗೆ 2024 ಸೆಪ್ಟೆಂಬರ್ 3, 10 ಹಾಗೂ 17ರಂದು ತಿಳಿವಳಿಕೆ ನೋಟಿಸ್ ನೀಡಿದ್ದರೂ ಶಾಲೆಗಳ ಮುಖ್ಯಸ್ಥರು, ಮಾಲೀಕರು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಯಾವುದೇ ದಾಖಲೆ ಹಾಗೂ ಉತ್ತರ ನೀಡದ ಹಿನ್ನೆಲೆಯಲ್ಲಿ ಶಾಲೆಗಳ ನವೀಕರಣ ಮಾನ್ಯತೆಯನ್ನು ರದ್ದುಗೊಳಿಸಿರುವುದಾಗಿ ಶಿಕ್ಷಣ ಇಲಾಖೆ ನೀಡಿರುವ ಆದೇಶದಲ್ಲಿ ತಿಳಿಸಲಾಗಿದೆ.


ಶಾಸಕರಿಗೂ ಒಂದೇ ನ್ಯಾಯ!
ಶಾಂತಿ ನಿಕೇತನ್ ಶಾಲೆ (ಬಾಗೇಪಲ್ಲಿ), ಸತ್ಯಸಾಯಿ ವಿದ್ಯಾನಿಕೇತನ್ (ತೀಮಾಕಲಹಳ್ಳಿ), ಅರುಣೋದಯ ಹಿರಿಯ ಪ್ರಾಥಮಿಕ ಶಾಲೆ (ಬಾಗೇಪಲ್ಲಿ), ಬ್ರೈಟ್ ಇಂಟರ್‌ನ್ಯಾಷನಲ್ ಶಾಲೆ (ಬಾಗೇಪಲ್ಲಿ), ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ (ಮಾರಗಾನುಕುಂಟೆ), ವಿದ್ಯಾ ಹಿರಿಯ ಪ್ರಾಥಮಿಕ ಶಾಲೆ (ಗೂಳೂರು), ಸೆವೆನ್ ಹಿಲ್ಸ್ ಆಂಗ್ಲ ಮಾಧ್ಯಮ ಶಾಲೆ (ಬಾಗೇಪಲ್ಲಿ), ಜ್ಞಾನದೀಪ್ತಿ ಪ್ರಾಥಮಿಕ ಶಾಲೆ (ಬಾಗೇಪಲ್ಲಿ), ಮದರ್ಸ್ ಪ್ರೈಡ್ ಪಬ್ಲಿಕ್ ಶಾಲೆ (ಬಾಗೇಪಲ್ಲಿ). ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷರಾಗಿರುವ ಶಾಂತಿ ನಿಕೇತನ್ ಶಾಲೆಯ ಮಾನ್ಯತೆಯನ್ನೂ ರದ್ದುಗೊಳಿಸಿ ಅದೇಶಿಸಲಾಗಿದ್ದು, ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಸಾರಲಾಗಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಖಾಸಗಿ ಶಾಲೆಗಳ ನವೀಕರಣಕ್ಕಾಗಿ ಮಾನ್ಯತೆ ಪಡೆಯಲು ಒಂದೊಂದು ವರ್ಷಕ್ಕೆ ಪ್ರತ್ಯೇಕವಾಗಿ ವಿನಾಯಿತಿ ನೀಡಿದ್ದರೂ, ಅದರಂತೆ ಕ್ರಮವಹಿಸದ 9 ಖಾಸಗಿ ಶಾಲೆಗಳ ನವೀಕರಣ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆನ್‌ಲೈನ್ ಮೂಲಕ ಒಂದೊಂದು ವರ್ಷಕ್ಕೂ ದಾಖಲೆ ಸಲ್ಲಿಸಿ ನವೀಕರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.- ಪಿ.ಬೈಲಾಂಜನಪ್ಪ, ಉಪನಿರ್ದೇಶಕ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net