ಬೆಳ್ತಂಗಡಿ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

New Project (3)
Published on

ಬೆಳ್ತಂಗಡಿ: ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗುರುವಾರ ದಿಢೀರ್ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಪ್ಲಾಟಿಂಗ್ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಬಹಳ ವಷರ್ಗಳಿಂದ ವಿಲೇವಾರಿಗೆ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಈ ಬಗ್ಗೆ ತ್ವರಿತವಾಗಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 30,520 ಪ್ಲಾಟಿಂಗ್ ಅರ್ಜಿಗಳಿವೆ. ಅದರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 7090 ಪ್ಲಾಟಿಂಗ್ ಅರ್ಜಿಗಳಿದ್ದು ಅವುಗಳ ವಿಲೇವಾರಿ ನಡೆಯುತ್ತಿದ್ದು ಇದಕ್ಕೆ ವನ್ ಟು ಫೈವ್ ಫಾರಂ ಮೂಲಕ ಪ್ಲಾಟಿಂಗ್ ನಡೆಸಬೇಕಿದೆ. ಜಿಲ್ಲೆಯಲ್ಲಿ 9,315 ವನ್ ಟು ಫೈವ್ ಫಾರಂ ಕೆಲಸ ಪೂರೈಸಿ ಅದನ್ನು ಸರ್ವೇ ಇಲಾಖೆಗೆ ಸಲ್ಲಿಸಲಾಗಿದೆ. ಉಳಿದ ಕಡತಗಳನ್ನು ಮುಂದಿನ ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಸರ್ಕಾರದಿಂದ ಮಂಜೂರಾದ ಜಾಗಗಳಿಗೆ ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಪ್ಲಾಟಿಂಗ್ ಮಾಡುತ್ತಿದ್ದರೆ ಈಗ ಸರ್ಕಾರದ ಆದೇಶದಂತೆ ಇಲಾಖೆಯಿಂದ ಸ್ವಯಂ ಪ್ರೇರಿತವಾಗಿ ಮಾಡಲಾಗುತ್ತಿದೆ ಎಂದರು.

ಸರ್ವರ್, ಸಿಬ್ಬಂದಿ ಸಮಸ್ಯೆ ಇಲ್ಲ

ಬೆಳ್ತಂಗಡಿ ತಾಲೂಕಿನ ಕಂದಾಯ ಇಲಾಖೆಯಲ್ಲಿ ಸರ್ವರ್ ಮತ್ತು ಸಿಬ್ಬಂದಿಯ ಹೆಚ್ಚಿನ ಸಮಸ್ಯೆ ಕಂಡು ಬಂದಿಲ್ಲ. ವಿಎಗಳ ಮುಷ್ಕರದ ಸಮಯ ಸಮಸ್ಯೆ ಉಂಟಾಗಿರುವ ಸಾಧ್ಯತೆ ಇದೆ. ಆದರೆ ಈಗ ಹೆಚ್ಚಿನ ಕಡತಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಪಂಚಾಯಿತಿಯಲ್ಲಿ ಸರ್ವರ್ ಸಮಸ್ಯೆ ಇದ್ದರೆ ಗಮನಕ್ಕೆ ತರುವಂತೆ ತಿಳಿಸಿದರು.

ಹೆದ್ದಾರಿ ಕಾಮಗಾರಿ

ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಇದನ್ನು ಮಳೆಗಾಲದ ಒಳಗಾಗಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಚಾರ್ಮಾಡಿ ಘಾಟಿ ಅಭಿವೃದ್ಧಿ ಕಾಮಗಾರಿ ಪುಂಜಾಲಕಟ್ಟೆ- ಚಾರ್ಮಾಡಿ ರಸ್ತೆ ಅಭಿವೃದ್ಧಿ ಕೆಲಸ ಪೂರ್ಣಗೊಂಡ ಬಳಿಕ ಆರಂಭವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net