ನಿಯೋಜನೆ ಅವಧಿ ರದ್ದು: ಜಿಲ್ಲಾ ಅಂಕಿತಾಧಿಕಾರಿಗಳ ಹುದ್ದೆಯಿಂದ 19 ವೈದ್ಯರು ಬಿಡುಗಡೆ

doctor
Published on

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತಾಧಿಕಾರಿಗಳ ಹುದ್ದೆಯಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ 19 ವೈದ್ಯರು, ವೈದ್ಯಾಧಿಕಾರಿಗಳನ್ನು ಮಾತೃ ಇಲಾಖೆಗೆ ತೆರಳುವಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಗುರುವಾರ ಆದೇಶಿಸಿದೆ.

ನಿಯೋಜನೆ ಅವಧಿ ಮುಕ್ತಾಯವಾದರೂ ಅದೇ ಹುದ್ದೆಯಲ್ಲಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೂಡಲೆ ಜಾರಿಗೆ ಬರುವಂತೆ ನಿಯೋಜನೆ ಅವಧಿಯನ್ನು ರದ್ದುಪಡಿಸಿ ಮಾತೃ ಇಲಾಖೆಗೆ ವೈದ್ಯರನ್ನು ಹಿಂದಿರುಗಿಸಲಾಗಿದೆ. ಗುರುವಾರ ಪೂರ್ವಹ್ನ ಸ್ವಯಂ ಬಿಡುಗಡೆಗೊಂಡು ಮುಂದಿನ ಸ್ಥಳ ನಿಯುಕ್ತಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಆಯುಕ್ತರ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಸಂಬಂಧಿಸಿದ ಯಾವುದೇ ಕರ್ತವ್ಯವನ್ನು ಅಂಕಿತಾಧಿಕಾರಿಗಳು ನಿರ್ವಹಿಸಬಾರದು.ತಪ್ಪಿದ್ದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆದೇಶದಲ್ಲಿ ಉಲ್ಲೇಖಿಸಿದೆ.

ಕೊಡಗು, ದಾವಣಗೆರೆ, ಬೆಂ.ಗ್ರಾಮಾಂತರ, ಬೆಂಗಳೂರು ಉತ್ತರ ವಲಯ, ಬಿಬಿಎಂಪಿ ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ, ಬೀದರ್​, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಪ್ಪಳ, ಕೋಲಾರ, ಮೈಸೂರು ಮಹಾನಗರ ಪಾಲಿಕೆ, ಮೈಸೂರು ಗ್ರಾಮಾಂತರ, ರಾಮನಗರ, ತುಮಕೂರು, ರಾಯಚೂರು, ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲಾ ಅಂಕಿತಾಧಿಕಾರಿಗಳ ಹುದ್ದೆಯಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net