ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Havy wave in arebiyan sea
Published on

ಕಾರವಾರ: ವಾಯುಭಾರ ಕುಸಿತದಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧ ವಾಗಿದ್ದು, ಕರಾವಳಿಯಲ್ಲಿ ಭಾರಿ ಮಳೆ ಮುಂದುವರಿದಿದೆ. ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿವೆ. ಆಗಾಗ ಭಾರಿ ಮಳೆ ಸುರಿಯುತ್ತಿದೆ.
ಕಾರವಾರ ಸಮೀಪ ಶುಕ್ರವಾರ ಲಂಗರು ಹಾಕಿದ್ದ ಮಲ್ಪೆಯ ಕ್ಷಿತಿಜಾ ಹಾಗೂ ಮಿಸ್ಬಾ ಎಂಬ ಎರಡು ಮೀನುಗಾರಿಕೆ ದೋಣಿಗಳು ರಾತ್ರಿ ಲಂಗರು ತುಂಡಾಗಿ ದಡಕ್ಕೆ ಬಂದು ಮರಳಿನಲ್ಲಿ ಸಿಲುಕಿದ್ದವು. ಕ್ಷಿತಿಜಾ ದೋಣಿಯನ್ನು ಕರಾವಳಿ ಕಾವಲುಪಡೆ ದೋಣಿ ಎಳೆದು ಹಾನಿಯಾಗದಂತೆ ತಡೆಯಲಾಗಿದೆ. ಇನ್ನೊಂದು ದೋಣಿಯನ್ನು ತಪ್ಪಿಸಲು ಹರಸಾಹಸಪಡಲಾಗುತ್ತಿದೆ.

ಭಾರಿ ಗಾಳಿಯಿಂದ ಮುರ್ಡೇಶ್ವರ ತೀರದಲ್ಲಿ ಲೈಫ್ ಗಾರ್ಡ್ಗಳ ವಿಶ್ರಾಂತಿಗಾಗಿ ರಚಿಸಿದ್ದ ಪ್ಯಾರಗೋಲದ ಮೇಲ್ಛಾವಣಿ ಹಾರಿ ಹೋಗಿದೆ. ಜೀವ ರಕ್ಷಕರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ಇಲ್ಲದಂತಾಗಿದೆ.
ಮಳೆ ಮುಂದುವರಿಯುವ ಮುನ್ಸೂಚನೆ
ಅ-1 ಹಾಗೂ 2 ರಂದು ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಶನಿವಾರ ಬೆಳಗಿನ ವರದಿಯಂತೆ ಅಂಕೋಲಾ-59.5, ಭಟ್ಕಳ-41, ದಾಂಡೇಲಿ-16.6, ಹಳಿಯಾಳ-6.2, ಹೊನ್ನಾವರ-24, ಜೊಯಿಡಾ-33, ಕಾರವಾರ-68.2, ಕುಮಟಾ-34.8,ಮುಂಡಗೋಡ-2, ಸಿದ್ದಾಪುರ-5.2, ಶಿರಸಿ-17.5, ಯಲ್ಲಾಪುರ-20.2 ಮಿಮೀ ಮಳೆಯಾಗಿದೆ. ಅಕ್ಟೋಬರ್ 1 ರಂದು ಜಿಲ್ಲೆಯಲ್ಲಿ ಆರೇಂಜ್ ಅಲರ್ಟ್, 2 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಎಚ್ಚರ ವಹಿಸಲು ಸೂಚನೆ

ಜಿಲ್ಲೆಯಲ್ಲಿ ಇನ್ನೂ 3 ರಿಂದ 4 ದಿನ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನ, ಜಾನುವಾರುಗಳ ಜೀವ, ಆಸ್ತಿ ಪಾಸ್ತಿಗಳ ಹಾನಿಯಾಗದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವರ್ಚುವಲ್ ಮೂಲಕ ಜಿಲ್ಲೆಯ ವಿವಿಧ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದರು. ಮೀನುಗಾರರ ಮೀನುಗಾರಿಕೆಗೆ ತೆರಳಬಾರದು. ತೀರಾ ಹಳೆಯ ಮನೆಗಳಲ್ಲಿ ವಾಸ ಮಾಡುತ್ತಿರುವವರಿಗೆ ಮಳೆ ನಿಲ್ಲುವವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದರು. ಗ್ರಾಮಗಳಲ್ಲಿ ಚರಂಡಿ ನೀರು ಹರಿಯಲು ಸಾಧ್ಯವಾದಗೆ ಮನೆಗಳಿಗೆ ನೀರು ನುಗ್ಗದಂತೆ ಹಾಗೂ ರಸ್ತೆಗೆ ಹರಿಯದಂತೆ ಕ್ರಮ ವಹಿಸಬೇಕು ಎಂದರು.
ಕಾಳಜಿ ಕೇಂದ್ರ ತೆರೆಯುವ ಸ್ಥಳ, ದೋಣಿಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂಕೋಲಾ ಮತ್ತು ಹೊನ್ನಾವರದಲ್ಲಿ ಇರುವ ಎಸ್‌ಡಿಆರ್‌ಎಫ್ ತಂಡಗಳಿಗೆ ಅಗತ್ಯವಿದ್ದಾಗ ನೆರವಿಗೆ ಬರುವಂತೆ ಸೂಚಿಸಬೇಕು. ಭೂ ಕುಸಿತ ಸಂಭವಿಸಬಹುದಾದ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು ಎಂದರು. ಎಡಿಸಿ ರಾಜು ಮೊಗವೀರ, ಎಸಿ, ತಹಸೀಲ್ದಾರ್‌ಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net